Saturday 21 June 2014

ತುಳು ನಾಡಿನ ನಮ್ಮ ಮನೆಯಲ್ಲಿ ವಿಷು ಹಬ್ಬ(ಬಿಸು ಪರ್ಬ)ದ ಆಚರಣೆ:

 ವಿಷು ಕಣಿ 

ಪೂರ್ತಿ ಇಟ್ಟ ವಿಷು ಕಣಿ 

ವಿಷು ಹಬ್ಬವನ್ನು ಸೌರಮಾನ ಯುಗಾದಿ ಎಂದೂ ಕರೆಯುತ್ತಾರೆ. ತುಳು ನಾಡಿನ ಜನರಿಗೆ ವಿಷುವಿನಿಂದ  ಹೊಸವರ್ಷ ಆರಂಭವಾಗುತ್ತದೆ.  ಸುಗ್ಗಿ ತಿಂಗಳು ಕೊನೆಯಾಗಿ, ಪಗ್ಗು ತಿಂಗಳ ಆರಂಭದಲ್ಲಿ ವಿಷು ಬರುತ್ತದೆ. ಇದು ಇಂಗ್ಲಿಷ್ ಕಾಲೆಂಡರ್ ಪ್ರಕಾರ ಏಪ್ರಿಲ್ 14 ಅಥವಾ 15 ಕ್ಕೆ ಬರುತ್ತದೆ. ವಿಷು ಹಬ್ಬವನ್ನು ಬೇರೆಬೇರೆ ಕಡೆ ಆಚರಿಸುತ್ತಾರೆ ಪ್ರತೀ ಭಾಗದಲ್ಲಿಯೂಆ ಹಬ್ಬದ ಆಚರಣೆ ಬೇರೆಬೇರೆ ರೀತಿ ಇರುತ್ತದೆ. ಕೇರಳದಲ್ಲಿ ಈ ಹಬ್ಬ ಒಂದು ಪ್ರಮುಖ ಹಬ್ಬ. ಅಲ್ಲಿನ ಆಚರಣೆಗೂ,ದಕ್ಷಿಣ ಕನ್ನಡ ಜಿಲ್ಲೆಯ,  ತುಳುನಾಡಿನ ನಮ್ಮೂರಲ್ಲಿ ಹಬ್ಬದ ಆಚರಣೆಗೂ ಬಹಳ ವ್ಯತ್ಯಾಸವಿದೆ.
“ವಿಷು ಕಣಿ” ಇಡುವುದೇ ಈ ಹಬ್ಬದ ವಿಶೇಷ . ’ವಿಷು ಕಣಿ’ ಎಂದರೆ ವಿವಿಧ ಹಣ್ಣು ತರಕಾರಿಗಳನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಡುವುದು.  Ex: ಗೇರುಹಣ್ಣು, ಮಾವಿನಹಣ್ಣು, ಮುಸುಂಬಿ, ಸೌತೆಕಾಯಿ, ಚೀನಿಕಾಯಿ ಇತ್ಯಾದಿ. ಇದನ್ನು ಹಿಂದಿನ ದಿನ ರಾತ್ರಿಯೇ ಇಡುತ್ತಾರೆ.
ವಿಷುವಿನ ದಿನ ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ, ವಿಷು ಕಣಿಯನ್ನು ನೋಡಿ, ದೇವರಿಗೆ ನಮಸ್ಕರಿಸಿ, ಅನಂತರ ಮನೆಯ ಹಿರಿಯರೆಲ್ಲರಿಗೂ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದು ಪದ್ಧತಿ.
ಹಿಂದಿನ ಕಾಲದಲ್ಲಿ ಜಮೀನ್ದಾರರಿಗೆ ಎಕ್ರೆ ಕಟ್ಟಲೆ ಆಸ್ತಿ ಇರುತಿತ್ತು. ಇದನ್ನು ನೋಡಿಕೊಂಡು, ಬೆಳೆ ಮಾಡಲು ಒಂದೊಂದು ಕುಟುಂಬಗಳನ್ನು ಮನೆಕಟ್ಟಿ ಕೂರಿಸುತ್ತಿದ್ದರು. ಅವರನ್ನು ಒಕ್ಕಲುಗಳು ಎಂದು ಕರೆಯುತ್ತಿದ್ದರು. ಆ ಒಕ್ಕಲುಗಳು ತಾವು ಬೆಳೆದದ್ದರಲ್ಲಿ ಅರ್ಧ ಭಾಗವನ್ನು ಧನಿಗಳಿಗೆ ಕೊಡಬೇಕಿತ್ತು. ಇದಕ್ಕೆ ‘ಗೇಣಿ’ ಕೊಡುವುದು ಎಂದು ಹೆಸರು. ಗೇಣಿಯನ್ನು ಸರಿಯಾಗಿ ಕೊಡದಿದ್ದರೆ ನಿರ್ದಾಕ್ಷಿಣ್ಯವಾಗಿ ಒಕ್ಕಲು ಎಬ್ಬಿಸಿ ಬೇರೆ ಕುಟುಂಬವನ್ನು ಆ ಮನೆಯಲ್ಲಿ ಕೂರಿಸುತ್ತಿದ್ದರು. ಆ ಕಾಲದಲ್ಲಿ ವಿಷು ಹಬ್ಬದ ದಿನ ಎಲ್ಲ ಒಕ್ಕಲು ಕುಟುಂಬದವರೂ ತಾವು ಬೆಳೆದ ತರಕಾರಿ ಮುಖ್ಯವಾಗಿ ಚೀನಿ ಕಾಯಿ ಎಳೆ ಗೇರುಬೀಜ (tender cashew nut), ಕಲ್ಲಂಗಡಿ ಹಣ್ಣು ಇತ್ಯಾದಿಗಳನ್ನು ಬೆಳೆಕಾಣಿಕೆಯಾಗಿ ಧನಿಗಳ ಮನೆಗೆ ತಂದುಕೊಡುತ್ತಿದ್ದರು ಹಾಗೆಯೇ ಗೇಣಿ ಬಾಕಿ ಉಳಿದಿದ್ದರೆ ಆ ದಿನ ಅದನ್ನು ಕೊಟ್ಟು ಆ ವರ್ಷದ ಲೆಕ್ಕಾಚಾರ ಮುಗಿಸಬೇಕು. ಇದು ಅಲಿಖಿತ ಒಪ್ಪಂದ. ಆ ದಿನ ಒಕ್ಕಲು ಕುಟುಂಬದ ಎಲ್ಲ ಸದಸ್ಯರೂ ಧನಿಗಳ ಮನೆಗೆ ಬರಲೇಬೇಕು ಮತ್ತು ಧನಿಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲೇಬೇಕು ಮತ್ತು ಮುಂದಿನ ವರ್ಷವೂ ಗದ್ದೆ ಬೇಸಾಯ ಮಾಡಲು ಅನುಮತಿ ಕೊಡಬೇಕೆಂದು ಕೇಳಿಕೊಳ್ಳಬೇಕು. ಆಗ ಧನಿಗಳು ಆ ಒಕ್ಕಲು ಕುಟುಂಬದವರನ್ನು ಇಷ್ಟವಾಗಿದ್ದಲ್ಲಿ 5 ವೀಳ್ಯದೆಲೆ ಮತ್ತು 1 ಅಡಿಕೆಯನ್ನು ಕೊಟ್ಟು ಆಶೀರ್ವದಿಸುತ್ತಿದ್ದರು. ಆ  ಕುಟುಂಬದವರನ್ನು ಇಷ್ಟವಾಗದಿದ್ದಲ್ಲಿ ಗದ್ದೆ ಬೇಸಾಯ ಮತ್ತು ಮನೆಯನ್ನು ಬಿಟ್ಟು ಹೋಗಿ ಎಂದು ಹೇಳುತ್ತಿದ್ದರು. ಅವರಿಗೆಲ್ಲ ಮಧ್ಯಾಹ್ನ ಅಲ್ಲಿ ಭರ್ಜರಿ ಊಟ.
ಆದರೆ ಈಗ ಕಾಲ ಬದಲಾಗಿದೆ ‘ಉಳುವವನೇ ಹೊಲದೊಡೆಯ’ ಎಂದು ಆಗಿದೆ. ಧನಿ-ಒಕ್ಕಲು ಪದ್ಧತಿಯೇ ಇಲ್ಲ. ಎಲ್ಲರೂ ಸಮಾನರು. ಇದು ನನಗೆ ಅತ್ಯಂತ ಸಂತೋಷದ ವಿಷಯ. ಒಕ್ಕಲು ಮಸೂದೆ ಬಂದ ಮೇಲೆ ನಮ್ಮೂರಿನ 99% ಮನೆಗಳಲ್ಲೂ ಈ ರೀತಿಯ ವಿಷು  ಹಬ್ಬದ ಆಚರಣೆಯನ್ನು ಬಿಟ್ಟಿದ್ದಾರೆ. ಏಕೆಂದರೆ ಧನಿ, ಒಕ್ಕಲುಗಳ ಸಂಬಂಧ ಹಳಸಿ ಹೋಗಿರುತ್ತದೆ. ಮನೆಯವರು ಮಾತ್ರ ದೇವರ ಎದುರು ‘ ಕಣಿ’ ಇಟ್ಟು ಪೂಜೆ ಮಾಡಿ ಹಬ್ಬದಡಿಗೆ ಮಾಡಿ ಊಟ ಮಾಡುತ್ತಾರೆ. 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ನನ್ನ ತಾಯಿ ಮನೆಯಲ್ಲಿ ಕೆಲವು ವರ್ಷಗಳ ಹಿಂದೆಯಷ್ಟೇ ಈ ಆಚರಣೆಯನ್ನು ನಿಲ್ಲಿಸಿದ್ದಾರೆ. ನಾನು ಸಣ್ಣವಳಿದ್ದಾಗ ನನ್ನ ತವರು ಮನೆಯಲ್ಲಿ ಸಂಭ್ರಮದಿಂದ ಇದೇ ರೀತಿ ಹಬ್ಬ ಆಚರಿಸುತ್ತಿದ್ದರು. ನನಗೆ ಕಲ್ಲಂಗಡಿ ಹಣ್ಣು ಎಂದರೆ ತುಂಬಾ ಇಷ್ಟ. ಆಗ ನಾನು ಚೀನಿಕಾಯಿ ತಂದವರ ಜೊತೆ “ನಿಕುಳು ದಾಯೆ ಬಚ್ಚಂಕಾಯಿ ಕೊಂಡತ್ತುದುಜ್ಜಾರು? ಕೋಪ ನಿಕುಳೆಡ” (ನೀವು ಕಲ್ಲಂಗಡಿ ಹಣ್ಣು ಯಾಕೆ ತಂದಿಲ್ಲ? ನಿಮ್ಮ ಜೊತೆ ಕೋಪ )ಎಂದು ಹೇಳುತ್ತಿದ್ದೆನಂತೆ. ಹಾಗಾಗಿ ಪ್ರತಿ ವರ್ಷ ಚೀನಿ ಕಾಯಿ ಜೊತೆ ಕಲ್ಲಂಗಡಿ ಹಣ್ಣನ್ನೂ ನನಗಾಗಿ ತರುತ್ತಿದ್ದರು. “ಇಂದು ಎಲ್ಯಕ್ಕೆಗು” (ಇದು ಸಣ್ಣಕ್ಕನಿಗೆ ) ಎಂದು ಹೇಳಿ ನನಗೆ ಕೊಡುತ್ತಿದ್ದರು.ಅದೆಲ್ಲಾ ಈಗ ಸವಿ ಸವಿ ನೆನಪುಗಳು.
 ನನ್ನ ಅತ್ತೆ ಮನೆಯಲ್ಲಿ(ಅದು ಕೂಡಾ ದ.ಕ ಜಿಲ್ಲೆಯಲ್ಲಿದೆ ) ಈಗಲೂ ವಿಷು ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ನಮ್ಮದು ಜಾಯಿಂಟ್ ಫ್ಯಾಮಿಲಿ. ಮನೆಯಿಂದ ಹೊರಗೆ ಇರುವ ಎಲ್ಲಾ ಸದಸ್ಯರೂ ಆ ದಿನ ಹಾಜರಿದ್ದು ಹಿರಿಯರ ಆಶೀರ್ವಾದ ಪಡೆದುಕೊಂಡು ಹಬ್ಬದ ಸಂಭ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ. ಈಗ ಒಕ್ಕಲು ಕುಟುಂಬ ಎಂಬುದು ಇಲ್ಲ. ಅವರು ಬೇಸಾಯ ಮಾಡುತ್ತಿದ್ದ ಜಮೀನು ಅವರದಾಗಿದೆ. ಆದರೂ, ಈಗಲೂ  ಅವರು  ಹಿಂದಿನ ಪಳೆಯುಳಿಕೆಯಂತೆ ವಿಷುವಿನ ದಿನ  ಚೀನಿಕಾಯಿ, ಎಳೆ ಗೋಡಂಬಿ, ಕಲ್ಲಂಗಡಿ ಹಣ್ಣು ಇತ್ಯಾದಿಗಳನ್ನು ನಮ್ಮಲ್ಲಿಗೆ ತರುತ್ತಾರೆ. ಅವರ ಮಕ್ಕಳೆಲ್ಲಾ ಈಗ ಚೆನ್ನಾಗಿ ಓದಿ ಬೇರೆ ಬೇರೆ ಕೆಲಸಗಳಲ್ಲಿ ಬೆಂಗಳೂರು , ಮೈಸೂರು, ಮಂಗಳೂರು, ದುಬೈ ಮುಂತಾದ ಕಡೆಗಳಲ್ಲಿ ಇದ್ದಾರೆ. ಇದು ನಮಗೆಲ್ಲಾ ತುಂಬಾ ಹೆಮ್ಮೆಯ ವಿಷಯ. ಪರದೇಶದಲ್ಲಿರುವವರನ್ನು ಬಿಟ್ಟು ಬೇರೆ ಕಡೆ ಕೆಲಸದಲ್ಲಿ ಇರುವವರೆಲ್ಲರೂ ರಜೆ ಹಾಕಿ ಆ ದಿನ ನಮ್ಮಲ್ಲಿಗೆ ಬಂದೇ ಬರುತ್ತಾರೆ. ಹಿಂದಿನ ಒಕ್ಕಲು ಮನೆಯ ಎಲ್ಲಾ ಸದಸ್ಯರು ಮೊದಲಿನಂತೆಯೇ ನಮ್ಮಲ್ಲಿಗೆ ಬರುತ್ತಾರೆ.ಎಲ್ಲರೂ ಮನೆಯ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದುಕೊಳ್ಳುತ್ತಾರೆ.ಮಧ್ಯಾಹ್ನ ಎಲ್ಲರಿಗೂ ಭರ್ಜರಿ ಊಟ. ಆ ದಿನದ ಸ್ಪೆಷಲ್ ಅಂದರೆ ಅವರೆಲ್ಲಾ ತಂದ  ಎಳೆ ಗೋಡಂಬಿ ಪಾಯಸ . ಈ ಎಳೆ ಗೋಡಂಬಿಗೆ ನಮ್ಮ ಕಡೆ ”ಚೋರೆ “ ಎನ್ನುತ್ತಾರೆ.ಅದನ್ನು ಸೀಳಿದರೆ ಅದರ ಒಳಗೆ ಮೃದುವಾದ ಮತ್ತು ರುಚಿಯಾದ ಎಳೆ ಗೋಡಂಬಿ ಇರುತ್ತದೆ. ವಸಂತ ಕಾಲದಲ್ಲಿ ವಿಷುವಿನ ಸಮಯಕ್ಕೆ ಸರಿಯಾಗಿ ಗೇರು ಮರದಲ್ಲಿ ಚೋರೆ, ಹಣ್ಣು ಇತ್ಯಾದಿಗಳು ಆಗಲು ಆರಂಭವಾಗುತ್ತದೆ. ಗೋಡಂಬಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ . ಈ ಪಾಯಸ ತುಂಬಾ ರುಚಿ. 

ಚೋರೆ (ಎಳೆ ಗೋಡಂಬಿ)

 
ಗೇರು ಹಣ್ಣು 

ಈಗ ನಮ್ಮಲ್ಲಿ ಈ ಆಚರಣೆ  ಒಂದು ರೀತಿಯ get together ನಂತೆ ನಡೆಯುತ್ತದೆ. ಬೆಳಗ್ಗೆ ಬಂದ ಎಲ್ಲರೂ ಮಾತನಾಡಿ, ನಕ್ಕು ನಲಿದು ಸಂಜೆಯತನಕ ಇದ್ದು enjoy ಮಾಡಿ ಹೋಗುತ್ತಾರೆ. ಈಗಿನ ಯುವ ಜನಾಂಗದ ನಾವೆಲ್ಲರೂ ಅವರ ಜೊತೆ ಬೆರೆತು ಮಾತುಕತೆ, ತಮಾಷೆ  ಎಲ್ಲಾ ಮಾಡುತ್ತೇವೆ. ನನಗೆ ಅವರ ಜೊತೆ ಬೆರೆಯುವುದೆಂದರೆ ನಮ್ಮ ಆತ್ಮೀಯ ನೆಂಟರ ಜೊತೆ ಬೆರೆತಂತೆ ಅತೀವ ಆನಂದವಾಗುತ್ತದೆ.
 ನಮ್ಮ ಮನೆಯ ಹಿರಿಯರು, “ಈ ಆಚರಣೆಯನ್ನು ಎಲ್ಲಾ ಕಡೆ ನಿಲ್ಲಿಸಿದ್ದಾರೆ, ನಾವೂ ನಿಲ್ಲಿಸೋಣ ಅಲ್ಲವೇ ?? ನೀವು ನಿಮ್ಮ ಕೆಲಸಗಳನ್ನು ಬಿಟ್ಟು ಈ ಚೀನಿಕಾಯಿ, ಎಳೆ ಗೋಡಂಬಿ ಇತ್ಯಾದಿಗಳನ್ನು ಹೊತ್ತು  ತರುವದು ನಿಮಗೂ ತೊಂದರೆಯಲ್ಲವೇ” ಎಂದು ಕೇಳುತ್ತಾರೆ . ಆದರೆ ಎಲ್ಲರೂ “ದಯವಿಟ್ಟು ಈ ಆಚರಣೆಯನ್ನು ನಿಲ್ಲಿಸಬೇಡಿ ಮುಂದುವರಿಸಿಕೊಂಡು ಹೋಗಿ”. ನಮಗೆ ನಿಮ್ಮನ್ನೆಲ್ಲಾ ಕಾಣಲು, ಎಲ್ಲರ ಜೊತೆ ಬೆರೆಯಲು ಇದು ಒಳ್ಳೆಯ ಅವಕಾಶ ಎಂದು ಕಳಕಳಿಯಿಂದ ವಿನಂತಿಸಿಕೊಂಡು “ಮುಂದಿನ ವರ್ಷ ಸಿಗುವ” ಎಂದು ಹೇಳಿ ಹೋಗುತ್ತಾರೆ. ನಾನು ನೋಡಿದಂತೆ ವರ್ಷದಿಂದ ವರ್ಷಕ್ಕೆ ನಮ್ಮಲ್ಲಿಗೆ ವಿಷು ಹಬ್ಬಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಹಾಗಾಗಿ ಈ ಆಚರಣೆಯನ್ನು ಸಧ್ಯಕ್ಕೆ ನಿಲ್ಲಿಸುವುದಿಲ್ಲ . ನಮಗೂ ಹೀಗೆಯೇ ಇದನ್ನು ಮುಂದುವರಿಸಿಕೊಂಡು ಹೋಗಲು ತುಂಬಾ ಆಸಕ್ತಿ ಇದೆ. 


Monday 31 March 2014

ತುಳುನಾಡಿನಲ್ಲಿ ಭೂತಾರಾಧನೆ

ಕರ್ನಾಟಕದ ಉಡುಪಿ ಜಿಲ್ಲೆಯ ಕೆಲವು ಭಾಗ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಸರಗೂಡು ಜಿಲ್ಲೆಗಳಲ್ಲಿ ತುಳುಮಾತನಾಡುವ ಜನರಿದ್ದಾರೆ. ಈ ತುಳು ಮಾತನಾಡುವ ಜನರಿರುವ ಪ್ರದೇಶವೇ ತುಳುನಾಡು. ತುಳು ನಾಡಿನಲ್ಲಿ ಭೂತಾರಾಧನೆ ತುಂಬಾ ಪ್ರಸಿದ್ದ. 
ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಭೂತಾರಾಧನೆಯನ್ನು ನೋಡುತ್ತಾ ಬೆಳೆದವಳು. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭೂತಗಳ ಬಗ್ಗೆ ಅವುಗಳ ಆರಾಧನೆಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಇಲ್ಲಿ ಬರೆಯುತ್ತಿದ್ದೇನೆ. 
ಭೂತವನ್ನು ಇಲ್ಲಿ ದೈವ ಎಂದೂ ಕರೆಯುತ್ತಾರೆ. ದೇವರಂತೆ ಭೂತಗಳು ಒಂದು spiritual spirit. ಇವುಗಳಲ್ಲಿ  ಹಲವು ಹೆಸರಿನ ಭೂತಗಳಿವೆ. ಅದರಲ್ಲಿ ಪ್ರಮುಖ ಭೂತಗಳು ಉಳ್ಳಾಲ್ತಿ, ಧೂಮಾವತಿ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಮಲರಾಯ, ಚಾಮುಂಡಿ, ಲಕ್ತೇಶ್ವರಿ ಇತ್ಯಾದಿ.

ಚಾಮುಂಡಿ ದೈವ

ಧೂಮಾವತಿ ದೈವ

ದೇವರಿಗೆ ಕಟ್ಟಿದಂತೆ ದೈವಕ್ಕೂ ಮಂದಿರವನ್ನು ಕಟ್ಟುತ್ತಾರೆ. ಇದಕ್ಕೆ ಭೂತಸ್ಥಾನ ಅಥವಾ ಭೂತದ ಗುಡಿ ಎಂದು ಕರೆಯುತ್ತಾರೆ. ಭೂತಾರಾಧನೆಗೆ ತುಳುವಿನಲ್ಲಿ ಭೂತಕೋಲ ಅಥವಾ ಭೂತ ನೇಮ ಎನ್ನುತ್ತಾರೆ. ಇದರಲ್ಲೂ ಹಲವು ವಿಧಗಳಿವೆ. ಕೆಲವು ಭೂತಗಳನ್ನು ಒಂದು ಕುಟುಂಬದವರು ತಮ್ಮ ಪೂರ್ವಜರ ಕಾಲದಿಂದಲೂ ನಂಬಿ, ಭೂತದ ಗುಡಿ ಕಟ್ಟಿ ಅಲ್ಲಿ ವರ್ಷಕ್ಕೊಮ್ಮೆ ಭೂತಕೋಲ ನಡೆಸುತ್ತಾ ಬಂದಿದ್ದಾರೆ. ಕುಟುಂಬದವರ ಆರ್ಥಿಕ ಸ್ಥಿತಿಗೆ ಹೊಂದಿಕೊಂಡು ಭೂತಕೋಲ ನಡೆಸುತ್ತಾರೆ. ಶ್ರೀಮಂತ ಕುಟುಂಬದವರು ಊರವರನ್ನೆಲ್ಲಾ ಕರೆದು ಅನ್ನದಾನ ಮಾಡಿ, ದೊಡ್ಡ ಚಪ್ಪರ ಸುಂದರ ಅಲಂಕಾರಗಳನ್ನು ಮಾಡಿ ಆಚರಿಸಿದರೆ, ಅಷ್ಟೊಂದು ಶ್ರೀಮಂತರಲ್ಲದ ಕುಟುಂಬದವರು ಕೆಲವರಿಗೆ ಮಾತ್ರ ಅನ್ನದಾನ ಮಾಡಿ, ಹೆಚ್ಚು ಜನರನ್ನು ಸೇರಿಸದೆ ಕುಟುಂಬದವರು ಮಾತ್ರ ಸೇರಿ ಭೂತಕೋಲ ನಡೆಸುತ್ತಾರೆ. ಆದರೆ ಧಾರ್ಮಿಕ ಆಚರಣೆಗಳು ಒಂದೇ ರೀತಿ.
ಇನ್ನೂ ಕೆಲವು ಭೂತಗಳು ಒಂದು ಹಳ್ಳಿಯವರೆಲ್ಲಾ ನಂಬಿಕೊಂಡು ಬಂದ ದೈವಗಳು. ಹಳ್ಳಿಯ ಮಧ್ಯದಲ್ಲಿ ಭೂತಸ್ಥಾನ ಇರುತ್ತದೆ. ಹಳ್ಳಿಯ ಜನರೆಲ್ಲ ಸೇರಿ ಭೂತನೇಮ ಆಚರಿಸುತ್ತಾರೆ. ನನ್ನ ಹುಟ್ಟೂರಲ್ಲಿ ಕಲ್ಕುಡ ಭೂತದ ಗುಡಿ ಇದೆ. ಅಲ್ಲಿ ಪ್ರತಿ ವರ್ಷ ಊರವರೆಲ್ಲಾ ಸೇರಿ ಸಡಗರದಿಂದ ಕಲ್ಕುಡ ಕೋಲ ನಡೆಸುತ್ತಾರೆ.
ಇನ್ನು ಕೆಲವು ಭೂತಗಳು ಹಲವು ಹಳ್ಳಿ ಪಟ್ಟಣಗಳಿಗೆ ಸೇರಿದ ದೈವಗಳಾಗಿರುತ್ತವೆ. ಇವುಗಳ ಭೂತದ ಗುಡಿ ದೊಡ್ಡದಾಗಿ ಸುತ್ತ ಮುತ್ತ ಕೋಲ ನಡೆಯಲು ತುಂಬಾ ಜಾಗ ಇರುತ್ತದೆ.  ಹಾಗೆಯೇ ಜನರಿಗೆ ಕುಳಿತುಕೊಳ್ಳಲು gallery ಅಂತಹ ಶಾಶ್ವತ ಕಟ್ಟೆಗಳ ವ್ಯವಸ್ಥೆ ಇರುತ್ತದೆ. ಈ ಭೂತನೇಮಕ್ಕೆ ತುಂಬಾ ಜನರು ಸೇರುತ್ತಾರೆ. ಈ ಭೂತಕ್ಕೆ ಸಂಬಂಧಿಸಿದವರು ಕಮಿಟಿ ಮಾಡಿ, ಆ ಕಮಿಟಿಯವರ ಮುಂದಾಳ್ತನದಲ್ಲಿ ಭೂತ ನೇಮ ನಡೆಯುತ್ತದೆ. ಈ ಭೂತಗಳಿಗೆ ತುಂಬಾ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, ಬೆಳ್ಳಿಯ ಮುಖವಾಡ, ಚಿನ್ನದ ನಾಲಿಗೆ ಇತ್ಯಾದಿಗಳು ಇರುತ್ತವೆ. ಹರಕೆಯ ರೂಪದಲ್ಲಿ ತುಂಬಾ ದುಡ್ಡು, ಬೆಳ್ಳಿ, ಚಿನ್ನ ಇತ್ಯಾದಿಗಳನ್ನು ಭಕ್ತರು ಕಾಣಿಕೆ ಡಬ್ಬಕ್ಕೆ ಹಾಕುತ್ತಾರೆ. ಜನರು ತಮಗೆ ಏನಾದರೂ ಕಷ್ಟ ಬಂದಾಗ, ಈ ಕಷ್ಟ ಕಳೆದರೆ ಭೂತಕ್ಕೆ ಹರಕೆ ಕೊಡುತ್ತೇವೆ ಎಂದು ಯೋಚಿಸಿರುತ್ತಾರೆ. ಹರಕೆಯ ರೂಪದಲ್ಲಿ ಬೆಳ್ಳಿಯ ಹಸು, ನಾಯಿ, ಬೆಕ್ಕು, ಪ್ರತಿಮೆ, ಸರ್ಪದ ಹೆಡೆ ಇತ್ಯಾದಿಗಳನ್ನು ಭೂತಕ್ಕೆ ಅರ್ಪಿಸುತ್ತಾರೆ. ಕೆಲವರು ಚಿನ್ನವನ್ನು ಸಹ ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ.ಇದು ಭೂತಾರಾಧನೆಯ ಬಗ್ಗೆ ಸಂಕ್ಷಿಪ್ತ ವಿವರವಾಯಿತು. 


                                    ಕಲ್ಲುರ್ಟಿ ದೈವ

ಪಂಜುರ್ಲಿ  ದೈವ

ಮಲರಾಯ ದೈವ

ನಾನು ಈ ಲೇಖನದಲ್ಲಿ ಹಲವು ಹಳ್ಳಿ ಮತ್ತು ಪಟ್ಟಣಗಳ ಜನರೆಲ್ಲ ಸೇರಿ ನಡೆಸುವ ಉಳ್ಳಾಲ್ತಿ ಭೂತದ ಬಗ್ಗೆ ಸ್ವಲ್ಪ ವಿವರಗಳನ್ನು ಬರೆಯುತ್ತೇನೆ. ಉಳ್ಳಾಲ್ತಿ ಭೂತವನ್ನು Mother Goddess ಎನ್ನಬಹುದು. ದ.ಕ(ದಕ್ಷಿಣ ಕನ್ನಡ)ದ ಅನಂತಾಡಿ, ಕೆಲಿಂಜ ಮತ್ತು ಮಾಣಿ ಎಂಬಲ್ಲಿನ  ಉಳ್ಳಾಲ್ತಿನೇಮ ತುಂಬಾ ಪ್ರಸಿದ್ಧ.
ಈ ಭೂತ ನೇಮ ಎಂದರೆ ಭೂತದ ವೇಷ ಹಾಕಿ ಉಳ್ಳಾಲ್ತಿ ದೈವಕ್ಕೆ ಸಮಾಧಾನವಾಗುವಂತೆ ನಡೆದುಕೊಳ್ಳುವುದು. ಭೂತಗಳ ಭಾಷೆ ತುಳು. ಭೂತದ ವೇಷಧಾರಿ ಇಲ್ಲಿ ಗುಡಿಗೆ ಸುತ್ತು ಬರುತ್ತಾರೆ. ಒಂದೊಂದು ಸುತ್ತಿಗೂ ವೇಷಧಾರಿಯ ನಾಟ್ಯ ಬೇರೆ ಬೇರೆ ರೀತಿ ಇರುತ್ತದೆ. ಭೂತ ಕಟ್ಟುವವರು ಸಹ ಒಂದೇ ಮನೆತನದವರು. ಇದು ಅವರಿಗೂ ವಂಶಪಾರಂಪರ್ಯವಾಗಿ ಬಂದುದು. ಆ ಮನೆತನಗಳ ಹೆಸರು – ನಲಿಕೆಯವರು, ಪರವರು ಇತ್ಯಾದಿ. ಭೂತ ಕಟ್ಟುವ ಮನುಷ್ಯ ಶುದ್ಧದಲ್ಲಿ ಇರಬೇಕು.
ರಾತ್ರಿ ಭೂತ ನೇಮ ಎಂದಾದರೆ ಭೂತ ಕಟ್ಟುವವರು, ಅವರ ಮನೆಯವರೆಲ್ಲರೂ ಬೆಳಗ್ಗೆಯೇ ಭೂತದ ಗುಡಿಯ ಬಳಿ ಬರುತ್ತಾರೆ. ಮನೆಯವರು ಎಂದರೆ ಭೂತ ಕಟ್ಟುವವನ ಅಮ್ಮ, ಸಹೋದರ ಸಹೋದರಿಯರು, ಪತ್ನಿ ಮತ್ತು ಮಕ್ಕಳು. ಇವರು ಭೂತಕ್ಕೆ ಬೇಕಾದ ಪರಿಕರಗಳನ್ನು ready ಮಾಡುತ್ತಾರೆ. ಭೂತಕ್ಕೆ ಅಣಿ ಎಂಬುದು ಇರುತ್ತದೆ. ಅದು ಭೂತದ ಮುಖ್ಯ ಅಲಂಕಾರಗಳಲ್ಲಿ ಒಂದು. ಈ ‘ಅಣಿ’ ಬಿದಿರ ಹಂದರವಾಗಿರುತ್ತದೆ. ನಂತರ ಅದನ್ನು ಎಳೆಯ ತೆಂಗಿನ ಗರಿ, ಮಲ್ಲಿಗೆ, ಸೇವಂತಿಗೆ, ಚೆಂಡು ಹೊಗಳಿಂದ ಅಲಂಕರಿಸುತ್ತಾರೆ. ಈ ಅಣಿ ಎಲ್ಲಾ ಭೂತಕೋಲಗಳಲ್ಲಿರುವ ಭೂತಗಳಿಗೆ ಇರುತ್ತವೆ. ಉಳ್ಳಾಲ್ತಿ ದೈವಕ್ಕೆ ಅದರದ್ದೇ ಆದ ಬೆಳ್ಳಿಯ ಅಣಿ ಇದೆ. ಇದು ರಾತ್ರಿ tubelight ಬೆಳಕಿನಲ್ಲಿ ಜಗಮಗಿಸುತ್ತದೆ. ಹೀಗೆ ಅಲಂಕರಿಸುವಾಗ ಭೂತಕಟ್ಟುವವರ ಮನೆಯ ಹೆಂಗಸರು ವಿಶಿಷ್ಟವಾದ ತುಳು ಹಾಡುಗಳನ್ನು ಹಾಡುತ್ತಿರುತ್ತಾರೆ. ಅದಕ್ಕೆ “ಪಾಡ್ದನ” ಎನ್ನುತ್ತಾರೆ. ಈ ಪಾಡ್ದನದಲ್ಲಿ ಭೂತದ ಹುಟ್ಟಿನಿಂದ ಹಿಡಿದು ಇಲ್ಲಿ ಬಂದು ನೆಲೆಸಿದ ಬಗ್ಗೆ ಸಂಪೂರ್ಣ ವಿವರ ಇರುತ್ತದೆ.
ಭೂತದ ವೇಷಧಾರಿ ತನ್ನ ಮುಖಕ್ಕೆ ಹಳದಿ ಬಣ್ಣವನ್ನು ಹಚ್ಚುತ್ತಾನೆ. ಅದಕ್ಕೆ “ಅರ್ದಳ” ಎನ್ನುತ್ತಾರೆ. ಹಾಗೆಯೇ ಕಣ್ಣಿನ ಸುತ್ತ ಕಾಡಿಗೆ ಅಲಂಕಾರ, ಬೇಕಾದಲ್ಲಿಗೆ ಕೆಂಪು ಬಣ್ಣ ಹಚ್ಚಿ ಅಲಂಕರಿಸಿಕೊಳ್ಳುತ್ತಾರೆ. ಹಾಗೆಯೇ ಭೂತದ ದಿರಿಸುಗಳನ್ನು ತೊಟ್ಟು ಸಿದ್ದವಾಗುತ್ತಾರೆ. ಹೀಗೆ ಉಳ್ಳಾಲ್ತಿ ಭೂತ ತನ್ನ ಅಣಿಯನ್ನು ಕಟ್ಟಿ ಮುಖಕ್ಕೆ ಬೆಳ್ಳಿಯ ಮುಖವಾಡ, ಚಿನ್ನದ ನಾಲಿಗೆಗಳಿಂದ ಅಲಂಕೃತವಾಗುತ್ತದೆ. ಶುಭ ಮುಹೂರ್ತದಲ್ಲಿ ಕಾಲಿಗೆ “ಗಗ್ಗರ”ವನ್ನು ಕಟ್ಟಿ ಭೂತ ತನ್ನ ಕೋಲಕ್ಕೆ ಸಿದ್ದವಾಗುತ್ತದೆ. ಗಗ್ಗರವೆಂದರೆ ಕಾಲಿಗೆ ಕಟ್ಟುವ ಗೆಜ್ಜೆಯ ತರದ ಸಾಧನ. ಭೂತ ಸಿದ್ದವಾದಮೇಲೆ ಭೂತದ ಸುತ್ತಮುತ್ತ ಇರುವವರು ಹೂಗಳನ್ನು ಭೂತದಮೇಲೆ ಎರಚುತ್ತಾರೆ. ಅದೇ ಭೂತನೇಮದ ಆರಂಭ. ಆಗ ಭೂತದ ವೇಷಧಾರಿಯಲ್ಲಿ ದೈವ ಆವಾಹನೆಯಾಗಿದೆ ಎಂದು ಎಲ್ಲಾ ಭಕ್ತರ ಧೃಡವಾದ ನಂಬಿಕೆ. ಹೀಗೆ ರಾತ್ರಿಯಾದೊಡನೆ ಭೂತನೇಮ ಆರಂಭವಾಗುತ್ತದೆ.
ಈ ಅಲಂಕೃತ ಭೂತ, ಗುಡಿಗೆ 9 ಸುತ್ತು ಬರುತ್ತದೆ. ಉಳ್ಳಾಲ್ತಿ ನೇಮದಲ್ಲಿ ಭೂತ, ಗುಡಿಗೆ ಸುತ್ತು ಬರುವಾಗ ಮುಂದಿನಿಂದ ಅಲಂಕೃತ ಪಲ್ಲಕಿ, ಧ್ವಜದಂತಹ ಕೆಲವು ರಚನೆಗಳನ್ನು ಹಿಡಿದವರು, ದೀವಟಿಕೆ ಹಿಡಿದವರು, gas light ಹಿಡಿದವರು, ಎರಡುಜನ ಭೂತಮಾಣಿಗಳು(ಭೂತದ ಶಿಷ್ಯರು) ಭೂತದ ಗುಡಿಗೆ ಸುತ್ತು ಬರುತ್ತಾರೆ. ಭೂತ ಇವರೆಲ್ಲರ ಹಿಂದಿನಿಂದ ತನ್ನ ವಿಶಿಷ್ಟ ನಾಟ್ಯದೊಡನೆ ಗುಡಿಗೆ ಸುತ್ತು ಬರುತ್ತದೆ.
 ಪ್ರತಿ ಸುತ್ತಿಗೂ ಒಂದೊಂದು ಹೆಸರು ಇರುತ್ತದೆ. ಮದಿಮ್ಮಾಳು ಸುತ್ತು, ಭಜನೆ ಸುತ್ತು, ವಾದ್ಯಸುತ್ತು, ಓಡಬಲಿ ಇತ್ಯಾದಿ. ಮೊದಲ ಸುತ್ತು ಮದಿಮ್ಮಾಳು ಸುತ್ತು. ಇದು ತುಂಬಾ ನಿಧಾನ. ಈ ರೀತಿ ಗುಡಿಗೆ ಸುತ್ತು ಬರಲು ಒಂದು ಘಂಟೆ ಬೇಕು. ನಂತರದ ಸುತ್ತುಗಳು ಸ್ವಲ್ಪ ಸ್ವಲ್ಪ ವೇಗಪಡೆದು ಕೊನೆಯ ಸುತ್ತಾದ ಓಡಬಲಿ ತುಂಬಾ fast. ಓಡಬಲಿಯಲ್ಲಿ ಗುಡಿಗೆ ಒಂದು ಸುತ್ತು ಬರಲು 5 ನಿಮಿಷ ಸಾಕು. ಓಡಬಲಿ 3 ಸುತ್ತು ಇರುತ್ತದೆ. ಈ ಸುತ್ತುಗಳಲ್ಲಿ ಉಳ್ಳಾಲ್ತಿ ಭೂತ ತನ್ನ ಅಣಿ, ಮುಖವಾಡ, ನಾಲಿಗೆ ಇತ್ಯಾದಿಗಳನ್ನು ತೆಗೆದಿರಿಸಿ ಓಡುತ್ತಾ ಗುಡಿಗೆ 3 ಸುತ್ತು ಬರುತ್ತದೆ. ಕೊನೆಗೆ ಭೂತದ ಗುಡಿಯ ಎದುರು ಬೀಳುತ್ತದೆ. ಅಲ್ಲಿಗೆ ಭೂತಕೋಲದ ಕಾರ್ಯಕ್ರಮ ಮುಗಿಯಿತು. ಈನಡುವೆ ಮತ್ತು ಕೊನೆಗೆ ಭೂತಕ್ಕೆ ದೊಡ್ಡ ದೊಡ್ಡ ಹರಕೆ ಹೊತ್ತವರು ಭೂತದ ಎದುರು ಹರಕೆ ಯಾವ ಸಂದರ್ಭದಲ್ಲಿ ಹೇಳಿದ್ದು, ಇದರಿಂದ ಹೇಗೆ ಕಷ್ಟ ಪರಿಹಾರವಾಯಿತು ಎಂದು ಭೂತದ ಜೊತೆ ಹೇಳಿ ಆಶೀರ್ವಾದ ಪಡೆಯುತ್ತಾರೆ. ಮಮೂಲಾಗಿ ಹರಕೆ ಹೇಳಿದವರು ತಮ್ಮ ಹರಕೆಯ ದುಡ್ಡು ಮತ್ತು ಬೇರೆ ಬೇರೆ ಬೆಳ್ಳಿ ಚಿನ್ನದ ವಸ್ತುಗಳನ್ನು ಕಾಣಿಕೆ ಡಬ್ಬಿಗೆ ಹಾಕುತ್ತಾರೆ. ಭೂತವು ಜನರನ್ನು ಆಶೀರ್ವದಿಸಿ “ಬೂಳ್ಯ”ವನ್ನು ಕೊಡುತ್ತದೆ. ಬೂಳ್ಯ ಎಂದರೆ ಹಲಸಿನ ಎಲೆಗೆ ಗಂಧ ಮತ್ತು ಅಕ್ಷತೆ ಹಾಕಿ ಭೂತದ ಎದುರು ಹಿಡಿದರೆ ಭೂತ ತನ್ನ ಕೈಯಲ್ಲಿರುವ ಖಡ್ಗದಿಂದ ಮುಟ್ಟಿ ಆಶೀರ್ವದಿಸುತ್ತದೆ. ಆ ಗಂಧವನ್ನು ಎಲ್ಲರೂ ಹಾಕಿಕೊಳ್ಳುತ್ತಾರೆ. ಭೂತ ತನ್ನ areaದ ಜನರಿಗೆ, ಜಾನುವಾರುಗಳಿಗೆ ಆಯುರಾರೋಗ್ಯ ಕೊಟ್ಟು ಕಾಪಾಡುವುದಾಗಿ ಅಭಯ ಕೊಡುತ್ತದೆ. ಹಾಗೆಯೇ ಕೆಲವರಿಗೆ ಮುಂದೆ ಭೂತಕ್ಕೆ ಏನು ಮಾಡಬೇಕು ಎಂಬ ಸಲಹೆಯನ್ನು ಕೊಡುತ್ತದೆ. ಕೆಲವರಿಗೆ ಹೀಗೆ ಮಾಡಬಾರದು ಎಂಬ ಎಚ್ಚರಿಕೆಯನ್ನೂ ಕೊಡುತ್ತದೆ.
ಹೀಗೆ ರಾತ್ರಿ ನಡೆಯುವ ಉಳ್ಳಾಲ್ತಿ ನೇಮ 9 ಘಂಟೆಗೆ ಆರಂಭವಾಗಿ ಸಾಧಾರಣ 12 ಘಂಟೆಗೆ ಮುಗಿಯುತ್ತದೆ. ನಡುನಡುವೆ “ಗರ್ನಾಲು”ಗಳ ಶಬ್ಧ ಖುಷಿಕೊಡುತ್ತದೆ. ಗರ್ನಾಲು ಎಂದರೆ ಪಟಾಕಿಯಂತೆ ಶಬ್ಧ ಉಂಟು ಮಾಡುವ ಒಂದು ವಸ್ತು. ಆ ದಿನ ತುಂಬಾ ಗೂಡಂಗಡಿಗಳೂ, ಹರಕೆ ವಸ್ತುವನ್ನು ಮಾರುವ ಅಂಗಡಿಗಳೂ, ಬೆಂಡು ಬತ್ತಾಸು ಇತ್ಯಾದಿಗಳ ಅಂಗಡಿಗಳೂ ಇರುತ್ತವೆ.
ಮುಖವಾಡ ಇಡುವ ಮೊದಲು ಉಳ್ಳಾಲ್ತಿ ದೈವ

ಉಳ್ಳಾಲ್ತಿ ದೈವದ ಬೆಳ್ಳಿಯ ಮುಖವಾಡ

 

ಬೆಳ್ಳಿಯ ಮುಖವಾಡ, ಚಿನ್ನದ ನಾಲಿಗೆ ಮತ್ತು ಬೆಳ್ಳಿಯ ಅಣಿ 
ಇವುಗಳಿಂದ ಅಲಂಕೃತವಾದ ಉಳ್ಳಾಲ್ತಿ ದೈವ

ನಾನು ಹುಟ್ಟಿನಿಂದಲೂ ಭೂತ ಕೋಲಗಳನ್ನು ನೋಡುತ್ತಾ ಬೆಳೆದವಳು. ನನಗೆ ದ.ಕ ಜಿಲ್ಲೆಯ ಎಲ್ಲರಂತೆ ಭೂತದ ಬಗ್ಗೆ ಅಪಾರ ನಂಬಿಕೆ ಹಾಗೂ ಭಕ್ತಿ ಇದೆ. ದೈವಗಳಿಗೆ ಕೋಪ ಜಾಸ್ತಿ ಎಂದು ನಂಬಿಕೆ. ದೇವರಿಗೆ ಸಹನೆ ಹೆಚ್ಚು. ಹಾಗಾಗಿ ನಮ್ಮಿಂದ ಏನಾದರೂ ತಪ್ಪಾದರೆ ನಮಗೆ ತೊಂದರೆ ಕೊಡಬೇಡ ಎಂದು ಭೂತಕ್ಕೆ ಎಲ್ಲರೂ ಪ್ರಾರ್ಥಿಸುತ್ತಾರೆ. ತನ್ನನ್ನು ನಂಬಿದವರನ್ನು ಭೂತ ಕಾಪಾಡುತ್ತದೆ ಎಂಬುದು ತುಳು ನಾಡಿನವರ ಒಂದು ದೃಢವಾದ ನಂಬಿಕೆ.

Saturday 1 March 2014

ಕೈಲು ಮುಹೂರ್ತ


ವಿಶಿಷ್ಟ ಸಂಸ್ಕೃತಿ ಹೊಂದಿದ ಕೊಡಗಿನ ಕೈಲು ಮುಹೂರ್ತಹಬ್ಬ.
ಹಿಂದಿನಕಾಲದಲ್ಲಿ ಹಳ್ಳಿಯ ಜನರು ತೋಟ ಗದ್ದೆಗಳ ಕೆಲಸ ಮುಗಿಸಿ ಸ್ವಲ್ಪ relax ಆಗಲು ಈ ಹಬ್ಬವನ್ನು ಆಚರಿಸುತ್ತಿದ್ದರು.. ಇದು ಹೆಚ್ಚಾಗಿ September ತಿಂಗಳಿನ ಮೊದಲ ವಾರದಲ್ಲಿ ಬರುತ್ತದೆ. ಇದು ಇಲ್ಲಿಯ ಆಯುಧ ಪೂಜೆ ಹಬ್ಬ. ಆದರೆ ಶಾಸ್ತ್ರೋಕ್ತ ಪೂಜೆಗಳ ಬದಲು ಸಂಭ್ರಮಿಸುವ ಹಬ್ಬ ಇದು.ಈಗಲೂ ಸಹ ಇದು ಪಟ್ಟಣದಲ್ಲಿರುವವರಿಗಿಂತ ಹಳ್ಳಿಯ ಜನರಿಗೆ ಸಂಭ್ರಮದ ಹಬ್ಬ. ಹಳ್ಳಿಗಳಲ್ಲಿ estate ಗಳನ್ನು ಹೊಂದಿ , ಪಟ್ಟಣದಲ್ಲಿ ನೆಲೆಸಿರುವವರು ಈ ಹಬ್ಬವನ್ನು ಆಚರಿಸಲು ತಮ್ಮ ಹಳ್ಳಿಗೆ ಹೋಗುತ್ತಾರೆ.ಹೊಟ್ಟೆ ತುಂಬಾ ಮದ್ಯ ಸೇವಿಸುವುದು, ಹಂದಿ ಮಾಂಸದ ಅಡಿಗೆ ಆ ದಿನದ ವಿಶೇಷ.ಸಂಭ್ರಮವೇ ಈ ಹಬ್ಬದ ಮುಖ್ಯ ಉದ್ದೇಶ.    ಇಂದು ಈ ಹಬ್ಬವನ್ನು ಕೊಡಗಿನಲ್ಲಿ ಜಾತಿ ಭೇದವಿಲ್ಲದೆ  ಜನರು ಸಂಭ್ರಮದಿಂದ ಆಚರಿಸುತ್ತಾರೆ. ಊರವರೆಲ್ಲಾ ಒಟ್ಟು ಸೇರಿ ಕೊಡಗಿನ ಸಾಂಪ್ರದಾಯಿಕ  ಕ್ರೀಡೆಗಳಲ್ಲಿ ಸಂಭ್ರಮಿಸುತ್ತಾರೆ. ಅಲ್ಲಲ್ಲಿ ಕೈಲು ಮುಹೂರ್ತ ಕ್ರೀಡೋತ್ಸವ ನಡೆಯುತ್ತದೆ. ಅದರಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಗುತ್ತದೆ.. ಅದರಲ್ಲಿ ಮುಖ್ಯವಾದ ಸ್ಪರ್ಧೆ ಎಂದರೆ ಕೋವಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವುದು. ಈ ಸ್ಪರ್ಧೆಯಲ್ಲಿ ಪುರುಷರೂ & ಮಹಿಳೆಯರೂ ಭಾಗವಹಿಸುತ್ತಾರೆ.



ಚಿಕ್ಲಿ ಹೊಳೆ ಡ್ಯಾಮ್

ಇದು ಮಡಿಕೇರಿ ಯಿಂದ ಸುಮಾರು 48 kms ದೂರದಲ್ಲಿ ಇದೆ. ಹಾಗೂ ಕುಶಾಲ ನಗರದಿಂದ 15 kms ದೂರದಲ್ಲಿದೆ. ಬೆಂಗಳೂರಿನಿಂದ ಬರುವವರಿಗೆ ಕುಶಾಲ ನಗರಕ್ಕೆ ಬಂದು ಇಲ್ಲಿಗೆ ಬರಬಹುದು. ಡೈರೆಕ್ಟ್ ಮಡಿಕೇರಿಗೆ ಬಂದರೂ ಕುಶಾಲ ನಗರ ಕಡೆ ಒಂದು ದಿನ ನೋಡುವಷ್ಟು ಪ್ರೇಕ್ಷಣೀಯ ಸ್ಥಳಗಳಿವೆ.ಹಾರಂಗಿ ಡ್ಯಾಮ್, ಚಿಕ್ಲಿ ಹೊಳೆ ಡ್ಯಾಮ್, ದುಬಾರೆ,ಕಾವೇರಿ ನಿಸರ್ಗಧಾಮ ಮತ್ತು ಗೋಲ್ಡನ್ ಟೆಂಪಲ್. ಇದನ್ನೆಲ್ಲ ಒಂದು ದಿನದಲ್ಲಿ ನೋಡಬಹುದು.

ದುಬಾರೆಯಿಂದ ಚಿಕ್ಲಿ ಹೊಳೆ 8kms ದೂರದಲ್ಲಿದೆ. ಇದು ತುಂಬಾ ಸಣ್ಣ ಡ್ಯಾಮ್. ಇದನ್ನು ಕಾವೇರಿ ನದಿಗೆ ಕಟ್ಟಲಾಗಿದೆ. ಕಾವೇರಿಯು ತಲಕಾವೇರಿಯಲ್ಲಿ ಹುಟ್ಟಿ ಚಿಕ್ಲಿ ಹೊಳೆ ಬಳಿ ಬರುವಾಗ ಸಣ್ಣ ನದಿಯಾಗಿ ಹರಿಯುತ್ತಾಳೆ. ಮತ್ತೆ ಮುಂದೆ ಹರಿಯುತ್ತಾ ಹರಿಯುತ್ತಾ ಉಪನದಿಗಳು ಸೇರಿಕೊಂಡು ಕಾವೇರಿ ಕರ್ನಾಟಕದ ಜೀವ ನದಿಯೆಂಬ ಹೆಸರನ್ನು ಪಡೆಯುತ್ತದೆ.
ಚಿಕ್ಲಿ ಹೊಳೆ ಡ್ಯಾಮ್ ಸಣ್ಣ ಅಣೆಕಟ್ಟು ಆದ್ದರಿಂದ ಇದಕ್ಕೆ crust gate ಗಳಿಲ್ಲ. ಕಾಲುವೆಗೆ ನೀರು ಬಿಡಲು ಒಂದು gate ಮಾತ್ರ ಇದೆ. ಮಳೆಕಾಲದಲ್ಲಿ  ಹೆಚ್ಚಾದ ನೀರು ಬಟ್ಟಲಿನಂತೆ ಹೊರ ಹೊಮ್ಮುತ್ತದೆ. ಅದು ನೋಡಲು ತುಂಬಾ ಸುಂದರ. ಇದನ್ನು ನೋಡಲು ಮಳೆ ಕಾಲ ಒಳ್ಳೆಯ ಸಮಯ. ಬೇಸಿಗೆಯಲ್ಲಿ ಅಷ್ಟು ನೀರು ಇರುವುದಿಲ್ಲ ಆದರೆ ಸಂಜೆ ಇಲ್ಲಿಗೆ ಬಂದರೆ sunset ನೋಡಲು ರಮಣೀಯ. ತಂಪಾದ ಗಾಳಿಯು ಬೀಸುತ್ತಿರುತ್ತದೆ. ಮಧ್ಯಾಹ್ನ ಅತಿ ಬಿಸಿಲು ಇರುತ್ತದೆ ಮತ್ತು ನೆರಳಿಗೆ ಗಿಡ ಮರಗಳಿಲ್ಲ.ಇಲ್ಲಿ ಯಾವುದೇ ಹೊಟೇಲ್, ಅಂಗಡಿ ಇತ್ಯಾದಿಗಳಿಲ್ಲ. ಹಾಗಾಗಿ ತಿನ್ನಲು, ಕುಡಿಯಲು ಬೇಕಾದ ವಸ್ತುಗಳನ್ನು ನಾವೇ ತೆಗೆದುಕೊಂಡು ಹೋಗಬೇಕು.

ಹಸಿರು ನಿಸರ್ಗದ ನಡುವೆ ಇರುವ ಈ ಚಿಕ್ಲಿ ಹೊಳೆ ಡ್ಯಾಮ್ ಮಳೆಕಾಲದಲ್ಲಂತೂ ಎಲ್ಲರ ಕಣ್ಮನ ಸೆಳೆಯುತ್ತದೆ.ಡ್ಯಾಮ್ ತುಂಬಿ ಅದರಿಂದ ಹೊರ ಹೋಗುವ ನೀರನ್ನು ನೋಡುವುದೇ ಅದ್ಭುತ ದೃಶ್ಯ.   


                

ಕೊಡಗಿನ ಕಣ್ಸೆಳೆಯುವ ಮಳೆಕಾಲದ ಬೆಡಗಿಯರು

ಅಬ್ಬೀ  ಜಲಪಾತ:

     ಇದು ಮಡಿಕೇರಿಯಿಂದ 8 km ದೂರದಲ್ಲಿದೆ. ಇಲ್ಲಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲೂ ಕಾಡು ಹಾಗೂ ಕಾಫಿ ತೋಟಗಳಿವೆ. ವಾಹನ ಪಾರ್ಕಿಂಗ್ ನಿಂದ ಸ್ವಲ್ಪ ದೂರ ಕಾಫಿ ತೋಟದ ಒಳಗೆ ನೆಡೆಯುತ್ತಾ ಹೋದಾಗ ಅಬ್ಬೀ ಫಾಲ್ಸ್ ಸಿಗುತ್ತದೆ.ಇದು ತುಂಬಾ ಸುಂದರವಾದ ಜಲಪಾತ. ಇದನ್ನು ನೋಡಲೆಂದು ಇದರ ಮುಂಭಾಗದಲ್ಲಿ ತೂಗು ಸೇತುವೆ ನಿರ್ಮಿಸಿದ್ದಾರೆ. ಅಲ್ಲಿ ನೀರಿಗೆ ಇಳಿಯುವುದು ನಿಷಿದ್ಧ. ಅಬ್ಬಿ ಫಾಲ್ಸ್ ನ ತಳದಲ್ಲಿ ತುಂಬಾ ಆಳ ಹಾಗೂ ಸುಳಿಗಳಿವೆ. ಹಿಂದೆ ಅನೇಕ ಜನರು ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಈಗ ಕೆಲವು ವರ್ಷಗಳಿಂದ ಅಂತಹ ಅನಾಹುತಕ್ಕೆ ಆಸ್ಪದವಿಲ್ಲ. ಮಳೆಕಾಲದಲ್ಲಿ ಈ ಜಲಪಾತವನ್ನು ನೋಡುವುದೇ ಚಂದ. ತೂಗು ಸೇತುವೆಯವರೆಗೂ ನೀರ ಹನಿಗಳು ಎರಚುತ್ತವೆ. 

   
                   

ಇರ್ಪು ಫಾಲ್ಸ್ :               
     ಇದು ಮಡಿಕೇರಿಯಿಂದ 80 km ದೂರದಲ್ಲಿದೆ. ಸುಂದರವಾದ ನಿಸರ್ಗದ ಸೊಬಗನ್ನು ಸವಿಯುತ್ತಾ ಸ್ವಲ್ಪ  ದೂರ ಕಾಲ್ನಡಿಗೆಯಲ್ಲಿ ಹೋದರೆ ಇರ್ಪು ಫಾಲ್ಸ್ ಕಾಣಸಿಗುತ್ತದೆ.ಇದು ಲಕ್ಷ್ಮಣ ತೀರ್ಥ ನದಿಯ ಜಲಪಾತ. ಇಲ್ಲಿ ನೀರು 60 feet ಎತ್ತರದಿಂದ ಬೀಳುತ್ತದೆ. ಮಳೆಕಾಲದಲ್ಲಿ ಇದರ ಅಂದವೇ ಬೇರೆ. ಬೇಸಿಗೆಯಲ್ಲಿ ಹೋದರೆ ನೀರಲ್ಲಿ ಇಳಿದು ಬೇಕಷ್ಟು ಆಟವಾಡಬಹುದು ಜಲಪಾತದ ನೀರಿಗೆ ತಲೆಯೋಡ್ಡಬಹುದು. ಜಲಪಾತದ ಅಡಿಯಲ್ಲಿ ಆಳವಿಲ್ಲ. ಏಕೆಂದರೆ ನೀರು ಅಗಲವಾದ ಕಲ್ಲು ಬಂಡೆಯ ಮೇಲೆ ಬಿದ್ದು ಕೊಳದ ತರ ನಿರ್ಮಾಣವಾಗಿದೆ.      



ಚೇಲಾವರ ಫಾಲ್ಸ್ :
       ಇದು ಕೊಡಗಿನ ಇನ್ನೊಂದು ಸುಂದರ ಜಲಪಾತ ಇದು ಚೆಯ್ಯಂಡಾಣೆ ಎನ್ನುವ ಪ್ರದೇಶದ ಸಮೀಪದಲ್ಲಿದೆ. ಇದು ವಿರಾಜಪೇಟೆಯಿಂದ 16 km ದೂರದಲ್ಲಿದೆ. ಹಾಲ್ನೊರೆಯಂತೆ ಧುಮುಕುವ ಈ ಜಲಪಾತ ಎತ್ತರದಿಂದ ಬಿದ್ದು ಕಾಫಿ ತೋಟದ ಮಧ್ಯದಲ್ಲಿ ಹರಿದು ಹೋಗುತ್ತದೆ. ಈ ಜಲಪಾತವನ್ನು ಚೋಮಕುಂಡ ಎಂಬ ಬೆಟ್ಟದಿಂದಲೂ ವೀಕ್ಷಿಸ ಬಹುದು.  




ಇದಲ್ಲದೆ ಕುಮಾರಾಧಾರ ನದಿಯಲ್ಲಿ ಸೋಮವಾರಪೇಟೆ ಸಮೀಪ ಮಲ್ಲಳ್ಳಿ ಫಾಲ್ಸ್ ಇದೆ. ಇದು ಕೊಡಗಿನ ಇನ್ನೊಂದು ಪ್ರಮುಖ ಜಲಪಾತ.
  ಇದಲ್ಲದೆ ಮಳೆಕಾಲದಲ್ಲಿ ಹೆಸರಿಲ್ಲದ ಅನೇಕ ಸುಂದರ ಜಲಪಾತಗಳು ಕಾಣಸಿಗುತ್ತವೆ. ಭಾಗಮಂಡಲದಿಂದ ಕರಿಕೆ ಮಾರ್ಗದಲ್ಲಿ ಮಳೆಕಾಲದಲ್ಲಿ 34 ಸುಂದರವಾದ ಜಲಪಾತಗಳು ಕಾಣಸಿಗುತ್ತವೆ. ಇದನ್ನು ಕರೆಯುವುದೇ ಜಲಪಾತ ಮಾರ್ಗ ಎಂದು...