Saturday 13 August 2011

ಕೆಸರು ಗದ್ದೆ ಒಲಂಪಿಕ್ಸ್....

ರಾಜ್ಯದಲ್ಲಿ ಕ್ರೀಡಾಜಿಲ್ಲೆ ಎಂದೇ ಕರೆಯಲ್ಪಡುವ ಕೊಡಗಿನಲ್ಲಿ ಜೂನ್ ನಿಂದ ಸೆಪ್ಟೆಂಬರ್ ತನಕ ತುಂಬಾ ಮಳೆ. ಕೊರೆಯುವ ಚಳಿ.
ಕೊಡಗಿನಲ್ಲಿ ಪುರಾತನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಪ್ರತಿ ಗ್ರಾಮ ಗ್ರಾಮಗಳಲ್ಲಿ ಕೆಸರುಗದ್ದೆ  ಕ್ರೀಡಾಕೂಟ, ನಾಟಿ ಓಟದ ಸಂಪ್ರದಾಯವನ್ನು ಹಿರಿಯರು ಹುಟ್ಟು ಹಾಕಿದ್ದರು. ಇದರಲ್ಲಿ ವಿಜೇತರಿಗೆ ಬಹುಮಾನವಾಗಿ ಬಾಳೆಗೊನೆ, ತೆಂಗಿನಕಾಯಿ, ಗೊಬ್ಬರ ಚೀಲಗಳನ್ನು ನೀಡಲಾಗುತ್ತಿತ್ತು. ಈಗ ಅದೇ ಹೊಸ ರೂಪವನ್ನು ಪಡೆದು ಕೆಸರು ಗದ್ದೆ ಕ್ರೀಡೋತ್ಸವವಾಗಿ ಕೊಡಗಿನ ಅಲ್ಲಲ್ಲಿ ನಡೆಯುತ್ತದೆ.
ಪುಟ್ಟ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ಪುರುಷರೂ, ಮಹಿಳೆಯರೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಈ ಕೆಸರುಗದ್ದೆ ಒಲಂಪಿಕ್ಸ್ ನ ವಿಶೇಷ. ಕೆಸರು ತುಂಬಿದ ಗದ್ದೆಯಲ್ಲಿ ಓಟದ ಸ್ಪರ್ಧೆ, ರಿಲೆ ಓಟ, ಹಗ್ಗ ಜಗ್ಗಾಟ, ವಾಲಿಬಾಲ್, ಫುಟ್ಬಾಲ್ ಮೊದಲಾದ ಸ್ಪರ್ಧೆಗಳು ನಡೆಯುತ್ತವೆ. ಕೆಸರಿನೋಕುಳಿಯಲ್ಲಿ  ಸ್ಪರ್ಧಾಳುಗಳು ಮಿಂದರೆ ನೋಡಲು ಬರುವ ಸಾರ್ವಜನಿಕರು ಮಳೆಯಲ್ಲಿ ನೆನೆದುಕೊಂಡೇ ಇವರಿಗೆ ಉತ್ತೇಜನ ನೀಡುತ್ತಾರೆ. ಕೊಡಗಿನ ಕೆಲವು ಕಡೆ ಈ ತರದ ಕ್ರೀಡಾಕೂಟ ನಡೆಯುತ್ತದೆ. ಈಗ ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಹಾಗೂ ಒಳ್ಳೆಯ ಬಹುಮಾನಗಳನ್ನು ಕೊಡಲಾಗುತ್ತದೆ.
1993ರಿಂದ ಕೊಡಗಿನ ಕಗ್ಗೋಡ್ಲುವಿನಲ್ಲಿ ಇದನ್ನು ರಾಜ್ಯ ಮಟ್ಟದ ಸ್ಪರ್ಧೆಯಾಗಿ ನಡೆಸಲಾಗುತ್ತದೆ. ಇದಕ್ಕೆ ಕ್ರೀಡಾ ಇಲಾಖೆ ಮತ್ತು ಹಲವು ಒಕ್ಕೂಟಗಳು ಪ್ರಾಯೋಜಕರಾಗಿದ್ದಾರೆ. ಹೀಗೆ ಹಲವು ವಿಶೇಷತೆಗಳೊಂದಿಗೆ ಈ ಕೆಸರಿನಾಟ ವರ್ಷದಿಂದ ವರ್ಷಕ್ಕೆ ಜನಮನ್ನಣೆ ಪಡೆಯುತ್ತಿದ್ದು, ಇದಕ್ಕೆ ಸರ್ಕಾರದ ಸ್ಪಂದನೆ ಅಗತ್ಯವಾಗಿ ಬೇಕಾಗಿದೆ.