Saturday 21 June 2014

ತುಳು ನಾಡಿನ ನಮ್ಮ ಮನೆಯಲ್ಲಿ ವಿಷು ಹಬ್ಬ(ಬಿಸು ಪರ್ಬ)ದ ಆಚರಣೆ:

 ವಿಷು ಕಣಿ 

ಪೂರ್ತಿ ಇಟ್ಟ ವಿಷು ಕಣಿ 

ವಿಷು ಹಬ್ಬವನ್ನು ಸೌರಮಾನ ಯುಗಾದಿ ಎಂದೂ ಕರೆಯುತ್ತಾರೆ. ತುಳು ನಾಡಿನ ಜನರಿಗೆ ವಿಷುವಿನಿಂದ  ಹೊಸವರ್ಷ ಆರಂಭವಾಗುತ್ತದೆ.  ಸುಗ್ಗಿ ತಿಂಗಳು ಕೊನೆಯಾಗಿ, ಪಗ್ಗು ತಿಂಗಳ ಆರಂಭದಲ್ಲಿ ವಿಷು ಬರುತ್ತದೆ. ಇದು ಇಂಗ್ಲಿಷ್ ಕಾಲೆಂಡರ್ ಪ್ರಕಾರ ಏಪ್ರಿಲ್ 14 ಅಥವಾ 15 ಕ್ಕೆ ಬರುತ್ತದೆ. ವಿಷು ಹಬ್ಬವನ್ನು ಬೇರೆಬೇರೆ ಕಡೆ ಆಚರಿಸುತ್ತಾರೆ ಪ್ರತೀ ಭಾಗದಲ್ಲಿಯೂಆ ಹಬ್ಬದ ಆಚರಣೆ ಬೇರೆಬೇರೆ ರೀತಿ ಇರುತ್ತದೆ. ಕೇರಳದಲ್ಲಿ ಈ ಹಬ್ಬ ಒಂದು ಪ್ರಮುಖ ಹಬ್ಬ. ಅಲ್ಲಿನ ಆಚರಣೆಗೂ,ದಕ್ಷಿಣ ಕನ್ನಡ ಜಿಲ್ಲೆಯ,  ತುಳುನಾಡಿನ ನಮ್ಮೂರಲ್ಲಿ ಹಬ್ಬದ ಆಚರಣೆಗೂ ಬಹಳ ವ್ಯತ್ಯಾಸವಿದೆ.
“ವಿಷು ಕಣಿ” ಇಡುವುದೇ ಈ ಹಬ್ಬದ ವಿಶೇಷ . ’ವಿಷು ಕಣಿ’ ಎಂದರೆ ವಿವಿಧ ಹಣ್ಣು ತರಕಾರಿಗಳನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಡುವುದು.  Ex: ಗೇರುಹಣ್ಣು, ಮಾವಿನಹಣ್ಣು, ಮುಸುಂಬಿ, ಸೌತೆಕಾಯಿ, ಚೀನಿಕಾಯಿ ಇತ್ಯಾದಿ. ಇದನ್ನು ಹಿಂದಿನ ದಿನ ರಾತ್ರಿಯೇ ಇಡುತ್ತಾರೆ.
ವಿಷುವಿನ ದಿನ ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ, ವಿಷು ಕಣಿಯನ್ನು ನೋಡಿ, ದೇವರಿಗೆ ನಮಸ್ಕರಿಸಿ, ಅನಂತರ ಮನೆಯ ಹಿರಿಯರೆಲ್ಲರಿಗೂ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದು ಪದ್ಧತಿ.
ಹಿಂದಿನ ಕಾಲದಲ್ಲಿ ಜಮೀನ್ದಾರರಿಗೆ ಎಕ್ರೆ ಕಟ್ಟಲೆ ಆಸ್ತಿ ಇರುತಿತ್ತು. ಇದನ್ನು ನೋಡಿಕೊಂಡು, ಬೆಳೆ ಮಾಡಲು ಒಂದೊಂದು ಕುಟುಂಬಗಳನ್ನು ಮನೆಕಟ್ಟಿ ಕೂರಿಸುತ್ತಿದ್ದರು. ಅವರನ್ನು ಒಕ್ಕಲುಗಳು ಎಂದು ಕರೆಯುತ್ತಿದ್ದರು. ಆ ಒಕ್ಕಲುಗಳು ತಾವು ಬೆಳೆದದ್ದರಲ್ಲಿ ಅರ್ಧ ಭಾಗವನ್ನು ಧನಿಗಳಿಗೆ ಕೊಡಬೇಕಿತ್ತು. ಇದಕ್ಕೆ ‘ಗೇಣಿ’ ಕೊಡುವುದು ಎಂದು ಹೆಸರು. ಗೇಣಿಯನ್ನು ಸರಿಯಾಗಿ ಕೊಡದಿದ್ದರೆ ನಿರ್ದಾಕ್ಷಿಣ್ಯವಾಗಿ ಒಕ್ಕಲು ಎಬ್ಬಿಸಿ ಬೇರೆ ಕುಟುಂಬವನ್ನು ಆ ಮನೆಯಲ್ಲಿ ಕೂರಿಸುತ್ತಿದ್ದರು. ಆ ಕಾಲದಲ್ಲಿ ವಿಷು ಹಬ್ಬದ ದಿನ ಎಲ್ಲ ಒಕ್ಕಲು ಕುಟುಂಬದವರೂ ತಾವು ಬೆಳೆದ ತರಕಾರಿ ಮುಖ್ಯವಾಗಿ ಚೀನಿ ಕಾಯಿ ಎಳೆ ಗೇರುಬೀಜ (tender cashew nut), ಕಲ್ಲಂಗಡಿ ಹಣ್ಣು ಇತ್ಯಾದಿಗಳನ್ನು ಬೆಳೆಕಾಣಿಕೆಯಾಗಿ ಧನಿಗಳ ಮನೆಗೆ ತಂದುಕೊಡುತ್ತಿದ್ದರು ಹಾಗೆಯೇ ಗೇಣಿ ಬಾಕಿ ಉಳಿದಿದ್ದರೆ ಆ ದಿನ ಅದನ್ನು ಕೊಟ್ಟು ಆ ವರ್ಷದ ಲೆಕ್ಕಾಚಾರ ಮುಗಿಸಬೇಕು. ಇದು ಅಲಿಖಿತ ಒಪ್ಪಂದ. ಆ ದಿನ ಒಕ್ಕಲು ಕುಟುಂಬದ ಎಲ್ಲ ಸದಸ್ಯರೂ ಧನಿಗಳ ಮನೆಗೆ ಬರಲೇಬೇಕು ಮತ್ತು ಧನಿಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲೇಬೇಕು ಮತ್ತು ಮುಂದಿನ ವರ್ಷವೂ ಗದ್ದೆ ಬೇಸಾಯ ಮಾಡಲು ಅನುಮತಿ ಕೊಡಬೇಕೆಂದು ಕೇಳಿಕೊಳ್ಳಬೇಕು. ಆಗ ಧನಿಗಳು ಆ ಒಕ್ಕಲು ಕುಟುಂಬದವರನ್ನು ಇಷ್ಟವಾಗಿದ್ದಲ್ಲಿ 5 ವೀಳ್ಯದೆಲೆ ಮತ್ತು 1 ಅಡಿಕೆಯನ್ನು ಕೊಟ್ಟು ಆಶೀರ್ವದಿಸುತ್ತಿದ್ದರು. ಆ  ಕುಟುಂಬದವರನ್ನು ಇಷ್ಟವಾಗದಿದ್ದಲ್ಲಿ ಗದ್ದೆ ಬೇಸಾಯ ಮತ್ತು ಮನೆಯನ್ನು ಬಿಟ್ಟು ಹೋಗಿ ಎಂದು ಹೇಳುತ್ತಿದ್ದರು. ಅವರಿಗೆಲ್ಲ ಮಧ್ಯಾಹ್ನ ಅಲ್ಲಿ ಭರ್ಜರಿ ಊಟ.
ಆದರೆ ಈಗ ಕಾಲ ಬದಲಾಗಿದೆ ‘ಉಳುವವನೇ ಹೊಲದೊಡೆಯ’ ಎಂದು ಆಗಿದೆ. ಧನಿ-ಒಕ್ಕಲು ಪದ್ಧತಿಯೇ ಇಲ್ಲ. ಎಲ್ಲರೂ ಸಮಾನರು. ಇದು ನನಗೆ ಅತ್ಯಂತ ಸಂತೋಷದ ವಿಷಯ. ಒಕ್ಕಲು ಮಸೂದೆ ಬಂದ ಮೇಲೆ ನಮ್ಮೂರಿನ 99% ಮನೆಗಳಲ್ಲೂ ಈ ರೀತಿಯ ವಿಷು  ಹಬ್ಬದ ಆಚರಣೆಯನ್ನು ಬಿಟ್ಟಿದ್ದಾರೆ. ಏಕೆಂದರೆ ಧನಿ, ಒಕ್ಕಲುಗಳ ಸಂಬಂಧ ಹಳಸಿ ಹೋಗಿರುತ್ತದೆ. ಮನೆಯವರು ಮಾತ್ರ ದೇವರ ಎದುರು ‘ ಕಣಿ’ ಇಟ್ಟು ಪೂಜೆ ಮಾಡಿ ಹಬ್ಬದಡಿಗೆ ಮಾಡಿ ಊಟ ಮಾಡುತ್ತಾರೆ. 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ನನ್ನ ತಾಯಿ ಮನೆಯಲ್ಲಿ ಕೆಲವು ವರ್ಷಗಳ ಹಿಂದೆಯಷ್ಟೇ ಈ ಆಚರಣೆಯನ್ನು ನಿಲ್ಲಿಸಿದ್ದಾರೆ. ನಾನು ಸಣ್ಣವಳಿದ್ದಾಗ ನನ್ನ ತವರು ಮನೆಯಲ್ಲಿ ಸಂಭ್ರಮದಿಂದ ಇದೇ ರೀತಿ ಹಬ್ಬ ಆಚರಿಸುತ್ತಿದ್ದರು. ನನಗೆ ಕಲ್ಲಂಗಡಿ ಹಣ್ಣು ಎಂದರೆ ತುಂಬಾ ಇಷ್ಟ. ಆಗ ನಾನು ಚೀನಿಕಾಯಿ ತಂದವರ ಜೊತೆ “ನಿಕುಳು ದಾಯೆ ಬಚ್ಚಂಕಾಯಿ ಕೊಂಡತ್ತುದುಜ್ಜಾರು? ಕೋಪ ನಿಕುಳೆಡ” (ನೀವು ಕಲ್ಲಂಗಡಿ ಹಣ್ಣು ಯಾಕೆ ತಂದಿಲ್ಲ? ನಿಮ್ಮ ಜೊತೆ ಕೋಪ )ಎಂದು ಹೇಳುತ್ತಿದ್ದೆನಂತೆ. ಹಾಗಾಗಿ ಪ್ರತಿ ವರ್ಷ ಚೀನಿ ಕಾಯಿ ಜೊತೆ ಕಲ್ಲಂಗಡಿ ಹಣ್ಣನ್ನೂ ನನಗಾಗಿ ತರುತ್ತಿದ್ದರು. “ಇಂದು ಎಲ್ಯಕ್ಕೆಗು” (ಇದು ಸಣ್ಣಕ್ಕನಿಗೆ ) ಎಂದು ಹೇಳಿ ನನಗೆ ಕೊಡುತ್ತಿದ್ದರು.ಅದೆಲ್ಲಾ ಈಗ ಸವಿ ಸವಿ ನೆನಪುಗಳು.
 ನನ್ನ ಅತ್ತೆ ಮನೆಯಲ್ಲಿ(ಅದು ಕೂಡಾ ದ.ಕ ಜಿಲ್ಲೆಯಲ್ಲಿದೆ ) ಈಗಲೂ ವಿಷು ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ನಮ್ಮದು ಜಾಯಿಂಟ್ ಫ್ಯಾಮಿಲಿ. ಮನೆಯಿಂದ ಹೊರಗೆ ಇರುವ ಎಲ್ಲಾ ಸದಸ್ಯರೂ ಆ ದಿನ ಹಾಜರಿದ್ದು ಹಿರಿಯರ ಆಶೀರ್ವಾದ ಪಡೆದುಕೊಂಡು ಹಬ್ಬದ ಸಂಭ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ. ಈಗ ಒಕ್ಕಲು ಕುಟುಂಬ ಎಂಬುದು ಇಲ್ಲ. ಅವರು ಬೇಸಾಯ ಮಾಡುತ್ತಿದ್ದ ಜಮೀನು ಅವರದಾಗಿದೆ. ಆದರೂ, ಈಗಲೂ  ಅವರು  ಹಿಂದಿನ ಪಳೆಯುಳಿಕೆಯಂತೆ ವಿಷುವಿನ ದಿನ  ಚೀನಿಕಾಯಿ, ಎಳೆ ಗೋಡಂಬಿ, ಕಲ್ಲಂಗಡಿ ಹಣ್ಣು ಇತ್ಯಾದಿಗಳನ್ನು ನಮ್ಮಲ್ಲಿಗೆ ತರುತ್ತಾರೆ. ಅವರ ಮಕ್ಕಳೆಲ್ಲಾ ಈಗ ಚೆನ್ನಾಗಿ ಓದಿ ಬೇರೆ ಬೇರೆ ಕೆಲಸಗಳಲ್ಲಿ ಬೆಂಗಳೂರು , ಮೈಸೂರು, ಮಂಗಳೂರು, ದುಬೈ ಮುಂತಾದ ಕಡೆಗಳಲ್ಲಿ ಇದ್ದಾರೆ. ಇದು ನಮಗೆಲ್ಲಾ ತುಂಬಾ ಹೆಮ್ಮೆಯ ವಿಷಯ. ಪರದೇಶದಲ್ಲಿರುವವರನ್ನು ಬಿಟ್ಟು ಬೇರೆ ಕಡೆ ಕೆಲಸದಲ್ಲಿ ಇರುವವರೆಲ್ಲರೂ ರಜೆ ಹಾಕಿ ಆ ದಿನ ನಮ್ಮಲ್ಲಿಗೆ ಬಂದೇ ಬರುತ್ತಾರೆ. ಹಿಂದಿನ ಒಕ್ಕಲು ಮನೆಯ ಎಲ್ಲಾ ಸದಸ್ಯರು ಮೊದಲಿನಂತೆಯೇ ನಮ್ಮಲ್ಲಿಗೆ ಬರುತ್ತಾರೆ.ಎಲ್ಲರೂ ಮನೆಯ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದುಕೊಳ್ಳುತ್ತಾರೆ.ಮಧ್ಯಾಹ್ನ ಎಲ್ಲರಿಗೂ ಭರ್ಜರಿ ಊಟ. ಆ ದಿನದ ಸ್ಪೆಷಲ್ ಅಂದರೆ ಅವರೆಲ್ಲಾ ತಂದ  ಎಳೆ ಗೋಡಂಬಿ ಪಾಯಸ . ಈ ಎಳೆ ಗೋಡಂಬಿಗೆ ನಮ್ಮ ಕಡೆ ”ಚೋರೆ “ ಎನ್ನುತ್ತಾರೆ.ಅದನ್ನು ಸೀಳಿದರೆ ಅದರ ಒಳಗೆ ಮೃದುವಾದ ಮತ್ತು ರುಚಿಯಾದ ಎಳೆ ಗೋಡಂಬಿ ಇರುತ್ತದೆ. ವಸಂತ ಕಾಲದಲ್ಲಿ ವಿಷುವಿನ ಸಮಯಕ್ಕೆ ಸರಿಯಾಗಿ ಗೇರು ಮರದಲ್ಲಿ ಚೋರೆ, ಹಣ್ಣು ಇತ್ಯಾದಿಗಳು ಆಗಲು ಆರಂಭವಾಗುತ್ತದೆ. ಗೋಡಂಬಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ . ಈ ಪಾಯಸ ತುಂಬಾ ರುಚಿ. 

ಚೋರೆ (ಎಳೆ ಗೋಡಂಬಿ)

 
ಗೇರು ಹಣ್ಣು 

ಈಗ ನಮ್ಮಲ್ಲಿ ಈ ಆಚರಣೆ  ಒಂದು ರೀತಿಯ get together ನಂತೆ ನಡೆಯುತ್ತದೆ. ಬೆಳಗ್ಗೆ ಬಂದ ಎಲ್ಲರೂ ಮಾತನಾಡಿ, ನಕ್ಕು ನಲಿದು ಸಂಜೆಯತನಕ ಇದ್ದು enjoy ಮಾಡಿ ಹೋಗುತ್ತಾರೆ. ಈಗಿನ ಯುವ ಜನಾಂಗದ ನಾವೆಲ್ಲರೂ ಅವರ ಜೊತೆ ಬೆರೆತು ಮಾತುಕತೆ, ತಮಾಷೆ  ಎಲ್ಲಾ ಮಾಡುತ್ತೇವೆ. ನನಗೆ ಅವರ ಜೊತೆ ಬೆರೆಯುವುದೆಂದರೆ ನಮ್ಮ ಆತ್ಮೀಯ ನೆಂಟರ ಜೊತೆ ಬೆರೆತಂತೆ ಅತೀವ ಆನಂದವಾಗುತ್ತದೆ.
 ನಮ್ಮ ಮನೆಯ ಹಿರಿಯರು, “ಈ ಆಚರಣೆಯನ್ನು ಎಲ್ಲಾ ಕಡೆ ನಿಲ್ಲಿಸಿದ್ದಾರೆ, ನಾವೂ ನಿಲ್ಲಿಸೋಣ ಅಲ್ಲವೇ ?? ನೀವು ನಿಮ್ಮ ಕೆಲಸಗಳನ್ನು ಬಿಟ್ಟು ಈ ಚೀನಿಕಾಯಿ, ಎಳೆ ಗೋಡಂಬಿ ಇತ್ಯಾದಿಗಳನ್ನು ಹೊತ್ತು  ತರುವದು ನಿಮಗೂ ತೊಂದರೆಯಲ್ಲವೇ” ಎಂದು ಕೇಳುತ್ತಾರೆ . ಆದರೆ ಎಲ್ಲರೂ “ದಯವಿಟ್ಟು ಈ ಆಚರಣೆಯನ್ನು ನಿಲ್ಲಿಸಬೇಡಿ ಮುಂದುವರಿಸಿಕೊಂಡು ಹೋಗಿ”. ನಮಗೆ ನಿಮ್ಮನ್ನೆಲ್ಲಾ ಕಾಣಲು, ಎಲ್ಲರ ಜೊತೆ ಬೆರೆಯಲು ಇದು ಒಳ್ಳೆಯ ಅವಕಾಶ ಎಂದು ಕಳಕಳಿಯಿಂದ ವಿನಂತಿಸಿಕೊಂಡು “ಮುಂದಿನ ವರ್ಷ ಸಿಗುವ” ಎಂದು ಹೇಳಿ ಹೋಗುತ್ತಾರೆ. ನಾನು ನೋಡಿದಂತೆ ವರ್ಷದಿಂದ ವರ್ಷಕ್ಕೆ ನಮ್ಮಲ್ಲಿಗೆ ವಿಷು ಹಬ್ಬಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಹಾಗಾಗಿ ಈ ಆಚರಣೆಯನ್ನು ಸಧ್ಯಕ್ಕೆ ನಿಲ್ಲಿಸುವುದಿಲ್ಲ . ನಮಗೂ ಹೀಗೆಯೇ ಇದನ್ನು ಮುಂದುವರಿಸಿಕೊಂಡು ಹೋಗಲು ತುಂಬಾ ಆಸಕ್ತಿ ಇದೆ.