Monday 18 July 2011

ನಿಮ್ಮ ಮನೆಗೊಂದು ಸುಂದರ ಕೈತೋಟ

ಒಂದು ಮನೆಗೆ ಸೊಗಸಾದ ಕೈತೋಟ ಮೆರುಗು ನೀಡುತ್ತದೆ. ಸುಂದರ ಕೈತೋಟ ಮನೆಯ ಅಂದವನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಯ ಮುಂದಿನ ಸುಂದರ ಕೈತೋಟ ನಿಮ್ಮ ಉತ್ತಮ ಅಭಿರುಚಿಯ ಸಂಕೇತ. ನೀವೇ ಬೆಳೆಸಿದ ಕೈತೋಟದಲ್ಲಿ ಕುಳಿತಾಗ ನಿಮಗೆ ಸಿಗುವ ಸಂತಸ, ನೆಮ್ಮದಿ ವರ್ಣಿಸಲಸದಳ.
ನಿಮ್ಮ ಕೈತೋಟದಲ್ಲಿ ಬೆಳೆಸಬಹುದಾದ ಹೂಗಿಡಗಳ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.  

ಅಂತೋರಿಯಂ : 

ಇತ್ತೀಚಿನ ವರ್ಷಗಳಲ್ಲಿ ದಿಢೀರ್ ಎಂದು ಜನಪ್ರಿಯತೆ ಗಳಿಸಿದ ಹೂವು ಅಂತೋರಿಯಂ. ಈಗ ಅಂತೋರಿಯಂ ಇಲ್ಲದೆ ಸಾಮಾನ್ಯ ಹೂದೋಟವೂ ಶೋಭಿಸುವುದಿಲ್ಲ ಎಂಬುದು ಹೂದೋಟ ಮಾಡುವವರ ಅಭಿಪ್ರಾಯ. ಇದರ ಜನಪ್ರಿಯತೆಗೆ ಮುಖ್ಯ ಕಾರಣ ಅದರ ಆಲಂಕರಿಕವಾದ ಎಲೆಗಳು ಮತ್ತು ಗಿಡದ ಮೇಲೆ ಬಣ್ಣ ಮಾಸದ, ಬಹುಕಾಲ ಬಾಡದ ಸುಂದರ ಹೂಗಳು. ಹೂಗಳನ್ನು ಕತ್ತರಿಸಿ ಹೂದಾನಿಯಲ್ಲಿಟ್ಟಾಗಲೂ ಇವು ಕೆಲವು ವಾರ ಬಾಡದೆ ತನ್ನ ಹೊಸತನವನ್ನು ಉಳಿಸಿಕೊಳ್ಳುತ್ತವೆ. ಬೇರೆ ಗಿಡಗಳಿಗೆ ಹೋಲಿಸಿದರೆ ಅಂತೋರಿಯಂ ಗಿಡಗಳ ಬೆಲೆ ದುಬಾರಿ ಎನಿಸುತ್ತದೆ. ಅಂತೋರಿಯಂನಲ್ಲಿ 500ಕ್ಕೂ ಹೆಚ್ಚು ಮೂಲ ತಳಿಗಳಿವೆ. ಗಿಡಗಳು ಅವುಗಳ ದರ್ಜೆಗೆ ಅನುಗುಣವಾಗಿ 50ರಿಂದ 1000 ರೂ ವರೆಗೆ ಬೆಲೆಬಾಳುತ್ತವೆ.
ಬೆಳೆಸುವ ವಿಧಾನ: ಮಣ್ಣು,ಮರಳು,ಒಣಗಿದ ಸಗಣಿ ಮತ್ತು ಚೇರಿ(ತೆಂಗಿನ ನಾರು) ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಇಟ್ಟುಕೊಳ್ಳಬೇಕು.ಅನಂತರ 12 ವ್ಯಾಸವುಳ್ಳ ಕುಂಡಗಳ ಕೆಳಭಾಗದಲ್ಲಿ ಇಟ್ಟಿಗೆ ಚೂರುಗಳನ್ನು ಹಾಕಿ ಅದರ ಮೇಲೆ ಸ್ವಲ್ಪ ತೆಂಗಿನ ನಾರನ್ನು ಹಾಕಬೇಕು. ಇದರ ಮೇಲೆ  ಅಂತೋರಿಯಂ ಗಿಡವನ್ನು ಇಟ್ಟು ಮಾಡಿಟ್ಟ ಮಿಶ್ರಣವನ್ನು ಹಾಕಿ ನೆಡಬೇಕು. ಗಿಡವನ್ನು ನೆಟ್ಟಾಗ ಕುಂಡದಲ್ಲಿ ಈ ಮಣ್ಣು, ಗೊಬ್ಬರ ಮಿಶ್ರಣದ ಪ್ರಮಾಣ ಅರ್ಧಕ್ಕಿಂತ ಜಾಸ್ತಿ ಇರಬಾರದು. ಯಾಕೆಂದರೆ ಗಿಡ ಬೆಳೆದಂತೆಲ್ಲಾ ಅಂತೋರಿಯಂನ ಬೇರುಗಳು ಮೇಲಕ್ಕೆ ಬರುತ್ತವೆ. ಆಗ ಸ್ವಲ್ಪ ಸ್ವಲ್ಪವಾಗಿ ಗೊಬ್ಬರ ಹಾಕುತ್ತಾ ಬರಬೇಕು. ಮಣ್ಣಿನಿಂದ ಹೊರಗಿರುವ ಬೇರುಗಳು ಒಣಗಿ ಹೋಗದಂತೆ ಅವುಗಳನ್ನು ತೆಂಗಿನ ನಾರಿನಿಂದ ಮುಚ್ಚಬೇಕು. ಈ ತೆಂಗಿನ ನಾರು ಯಾವಾಗಲೂ ತೇವದಿಂದಿರುವಂತೆ ನೂಡಿಕೊಳ್ಳಬೇಕು. ಈ ಗಿಡಗಳು ನೆರಳುಪ್ರಿಯ ಗಿಡಗಳು. ಬಿಸಿಲು ಬೀಳುವ ಜಾಗದಲ್ಲಿ shade netಗಳನ್ನು ಹಾಕಿ ಅವುಗಳ ಕೆಳಗೆ ಕುಂಡಗಳನ್ನಿಟ್ಟು ಬೆಳೆಸಬೇಕು. ನೆಲದ ಮೇಲೆ ಪಾತಿಗಳನ್ನು ಮಾಡಿ ಅದರಲ್ಲೂ ಬೆಳೆಸಬಹುದು. ಅಂತೋರಿಯಂನ್ನು ಬೀಜ ಮತ್ತು ಬುಡದಿಂದ ಹೊರಡುವ ಮರಿಗಿಡಗಳಿಂದ ಹೊಸಗಿಡಗಳನ್ನು ಪಡೆಯಬಹುದು. ಈಗ ಟಿಷ್ಯೂಕಲ್ಚರ್ ವಿಧಾನದಿಂದ ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ಉತ್ಪಾದಿಸಲಾಗುತ್ತದೆ. ಸಾವಯವ ಗೊಬ್ಬರ ಅಂತೋರಿಯಂಗೆ ಹೆಚ್ಚು ಸೂಕ್ತ. ಇದನ್ನು ವಾಣಿಜ್ಯ ಬೆಳಯಾಗಿಯೂ ಬೆಳೆಸುತ್ತಾರೆ.      


ಇಂಪೇಶನ್ಸ್:
ಇದು ಬಹಳ ಮೃದುವಾದ ಕಾಂಡ ಮತ್ತು ಬೇರನ್ನು ಹೊಂದಿದ ಸಸ್ಯ. ಇವುಗಳನ್ನು ಸಣ್ಣ ಅಥವಾ ಮಾಧ್ಯಮ ಗಾತ್ರದ ಕುಂಡಗಳಲ್ಲಿ ಬೆಳೆಸಬಹುದು. ಇವು ವರ್ಷವಿಡೀ ಬಣ್ಣ ಬಣ್ಣದ ಹೂಗಳಿಂದ ಕೂಡಿ ನೋಡುವವರ ಮನ ಸೂರೆಗೊಳ್ಳುವಂತೆ ಮಾಡುತ್ತದೆ.  ಇಂಪೇಶನ್ಸ್ ಗಿಡಕ್ಕೆ ಮಡಿಕೇರಿಯ ಹವೆ ತುಂಬಾ ಸೂಕ್ತ.
ಬೆಳೆಸುವ ವಿಧಾನ:  ಇವುಗಳನ್ನು ಬೀಜದಿಂದ ಮತ್ತು ಕೊಂಬೆಯನ್ನು ಕತ್ತರಿಸಿ ಬೇರೆಡೆ ನೆಡುವುದರಿಂದ ಅಭಿವೃದ್ದಿಪಡಿಸಿಕೊಳ್ಳಬಹುದು. ಸಣ್ಣ ಅಥವಾ ಮಾಧ್ಯಮ ಗಾತ್ರದ ಕುಂಡದ ಕೆಳಭಾಗದಲ್ಲಿ ಇಟ್ಟಿಗೆ ಚೂರುಗಳನ್ನು ಹಾಕಿ ಇದರ ಮೇಲೆ ಮಣ್ಣು, ಮರಳು ಮತ್ತೆ ಒಣಗಿದ ಸಗಣಿಯನ್ನು ಸಮಪ್ರಮಾಣದಲ್ಲಿ ಸೇರಿಸಿ ಮಾಡಿದ ಮಿಶ್ರಣವನ್ನು ಹಾಕಿ ಅದರಲ್ಲಿ ಇಂಪೇಶನ್ಸ್ ಗಿಡವನ್ನು ನೆಡಬೇಕು. ಇಂಪೇಶನ್ಸ್ ಗಿಡವನ್ನು ಕೊಂಬೆ ಕತ್ತರಿಸಿ ನೆಡಲು ಮಳೆಗಾಲ ಸೂಕ್ತವಾದ ಸಮಯ. ಈ ಸಮಯದಲ್ಲಿ ಕೊಂಬೆಗಳು ಬಹಳ ಬೇಗ ಬೇರು ಕೊಟ್ಟು ಶೀಘ್ರವಾಗಿ ಬೆಳೆಯುತ್ತವೆ. ಈ ಗಿಡಕ್ಕೆ ಹದವಾದ ಬಿಸಿಲು ಅಂದರೆ ಬಳಗ್ಗಿನ ಅಥವಾ ಸಂಜೆಯಬಿಸಿಲು ಸಾಕಾಗುತದೆ. ಇವಗಳಿಗೆ ದಿನಾ ನೀರು ಹಾಕಿ ಇವುಗಳ ಬುಡ ಯಾವಾಗಲೂ ತೇವದಿಂದಿರುವಂತೆ ನೋಡಿಕೊಳ್ಳಬೇಕು. ಹಾಗಾದಲ್ಲಿ ಆರೋಗ್ಯವಂತ, ಸುಂದರವಾದ ಹೂಗಳನ್ನು ಕೊಡುವ ಗಿಡಗಳನ್ನು ಪಡೆಯಬಹುದು. ಇಂಪೇಶನ್ಸ್ ರಾಸಾಯನಿಕ ಗೊಬ್ಬರಕ್ಕಿಂತ ಸಾವಯವ ಗೊಬ್ಬರ ಹೆಚ್ಚು ಸೂಕ್ತ. ಇಂಪೇಶನ್ಸ್ ಗಿಡಗಳಿಗೆ ಹಸಿರು ಹುಳಗಳ ಬಾಧೆ ಕಾಡುವುದರಿಂದ ಅದಕ್ಕೆ ಮೆಟಾಸೀಡ್ ಕೀಟನಾಶಕವನ್ನು ಆಗಾಗ ಸಿಂಪಡಿಸಬೇಕು.

ಗುಲಾಬಿ:
ಗುಲಾಬಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ? ಸೌಂದರ್ಯದ ಪ್ರತೀಕವಂತಿರುವ ಈ ಹೂವಿಗೆ ಸಾಟಿಯಾದ ಹೂವೇ ಇಲ್ಲ ಎನ್ನುವ ಅಭಿಪ್ರಾಯ ನಮ್ಮಲ್ಲಿದೆ. ಗುಲಾಬಿಯಲ್ಲಿ ಅನೇಕ ತಳಿಗಳಿವೆ. ದೊಡ್ಡ ಹೂವನ್ನು ಕೊಡುವ ಹೈಬ್ರಿಡ್ ಟಿ ಜಾತಿಯ ಗಿಡಗಳು ಮತ್ತು ಬಟನ್ ರೋಸ್ ಎಂದು ಕರೆಯಲ್ಪಡುವ ಮಿನಿಯೆಚರ್ ಜಾತಿಯ ಗಿಡಗಳು ಕೈತೂಟದಲ್ಲಿ ಬೆಳೆಸಲು ಸೂಕ್ತವಾಗಿವೆ.
 ಬೆಳೆಸುವ ವಿಧಾನ: ಗುಲಾಬಿಯನ್ನು ನೆಲದ ಮೇಲೆ ಅಥವಾ ದೊಡ್ಡ ಕುಂಡದಲ್ಲಿ ಬೆಳೆಸಬಹುದಾಗಿದೆ. ಗುಲಾಬಿ ಗಿಡ ಹೆಚ್ಚಾಗಿ ಬಿಸಿಲನ್ನು ಬಯಸುವುದರಿಂದ ಬಿಸಿಲು ಬೀಳುವ ಜಾಗದಲ್ಲಿ ಈ ಗಿಡವನ್ನು ಬೆಳೆಸಬೇಕು ಇಲ್ಲವಾದರೆ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಮಣ್ಣು, ಮರಳು ಮತ್ತು ಸಗಣಿ ಗೊಬ್ಬರವನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿದ ಮಿಶ್ರಣದಲ್ಲಿ ಗುಲಾಬಿ ಗಿಡವನ್ನು ನೆಡಬೇಕು. ಗುಲಾಬಿಗಿಡಕ್ಕೆ ರಂಜಕ, ಪೊಟ್ಯಶ್ ಮತ್ತು ಸಾರಜನಕದಿಂದ ಕೂಡಿದ ರಾಸಾಯನಿಕ ಮತ್ತು ಯಾವುದೇ ಸಾವಯವ ಗೊಬ್ಬರಗಳನ್ನು ಬಳಸಬಹುದಾಗಿದೆ. ಗುಲಾಬಿ ಗಿಡ ಚಿಗುರೊಡೆದಾಗ ಅದಕ್ಕೆ ಚಿಗುರು ಮತ್ತು ಮೊಗ್ಗನ್ನು ತಿನ್ನುವ ಅನೇಕ ಕೀಟಗಳ ಬಾಧೆ ಉಂಟಾಗುತ್ತದೆ. ಅದಕ್ಕೆ ಮೆಟಾಸಿಡ್ ಕೀಟನಾಶಕವನ್ನು ಸಿಂಪಡಿಸುವುದರಿಂದ ಈ ತೊಂದರೆಯನ್ನು ತಡೆಯಬಹುದು. ಗುಲಾಬಿಗೆ ಬರುವ ಇನ್ನೊಂದು ಕಾಯಿಲೆಯೆಂದರೆ ಬೂಷ್ಟು ರೋಗ. ಈ ರೋಗ ಬಂದ ಗಿಡದ ಎಲೆ ಮತ್ತು ಕಾಂಡಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಈ ರೋಗ ತೀವ್ರವಾದರೆ ಎಲೆಗಳೆಲ್ಲಾ ಉದುರಿ ಹೋಗಿ ಗಿಡ ಸತ್ತು ಹೂಗುತ್ತದೆ. ಇದಕ್ಕೆ ಬೆವಸ್ಟೀನ್ ಎಂಬ ಕೀಟನಾಶಕವನ್ನು ಸಿಂಪಡಿಸಿ ಈ ರೋಗವನ್ನು ತಡೆಗಟ್ಟಬಹುದು. ನೀರಿನ ಕೊರತೆಯುಂಟಾದರೆ ಮತ್ತು ರೋಗದ ರಕ್ಷಣೆ ಮಾಡದಿದ್ದರೆ ಹಾಗೂ ಸಕಾಲದಲ್ಲಿ ಕಳೆ ತೆಗೆಯದಿದ್ದರೆ ಗಿಡಕ್ಕೆ ಹಾನಿಯುಂಟಾಗುತ್ತದೆ. ಹೀಗೆ ಗುಲಾಬಿ ಗಿಡ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ಉತ್ತಮ ರೀತಿಯಲ್ಲಿ ಬೆಳೆಸಿದರೆ ಇದು ಕೈತೋಟದ ಅಂದವನ್ನು ಹೆಚ್ಚಿಸುತ್ತದೆ.

ಸೇವಂತಿಗೆ ಮತ್ತು ಜರ್ಬೆರಾ:

ಸೇವಂತಿಗೆ ಮತ್ತು ಜರ್ಬೆರಾಗಳನ್ನು ಕುಂಡಗಳಲ್ಲೂ ನೆಲದ ಮೇಲೆ ಪಾತಿಗಳಲ್ಲೂ ಬೆಳೆಸಬಹುದು. ಸೇವಂತಿಗೆಯಲ್ಲಿ ವಿವಿಧ ಬಣ್ಣಗಳ ಅನೇಕ ತಳಿಗಳಿವೆ.   ಜರ್ಬೆರಾದಲ್ಲೂ ಆರ್ಡಿನರಿ ಜರ್ಬೆರಾ ಮತ್ತು ಅತ್ಯಾಕರ್ಷಕ ಹೂಗಳನ್ನು ಕೊಡುವ ಹೈಬ್ರೆಡ್ ಜರ್ಬೆರಾಗಳಿವೆ.
ಬೆಳೆಸುವ ವಿಧಾನ: ಸೇವಂತಿಗೆ ಮತ್ತು ಜರ್ಬೆರಾಗಳನ್ನು ಮಣ್ಣು,ಮರಳು ಮತ್ತು ಸಗಣಿ ಗೊಬ್ಬರ ಮಿಶ್ರ ಮಾಡಿದ ಮಿಶ್ರಣದಲ್ಲಿ ನೆಡಬೇಕು. ಇವುಗಳಿಗೆ ಬಿಸಿಲು ಬೀಳುವ ಜಾಗ ಸೂಕ್ತವಾಗಿದೆ. ಇವುಗಳಿಗೆ ಗುಲಾಬಿಗೆ  ಉಪಯೋಗಿಸುವಂತೆ ರಾಸಾಯನಿಕ ಮತ್ತು  ಸಾವಯವ ಗೊಬ್ಬರಗಳನ್ನು ಉಪಯೋಗಿಸಬಹುದು. ಮತ್ತು ಗುಲಾಬಿಗೆ ಸಿಂಪಡಿಸುವ ಕೀಟನಾಶಕವನ್ನು ಇದಕ್ಕೂ ಸಿಂಪಡಿಸಬಹುದು. ಬೇರೆ ಬೇರೆ ಬಣ್ಣದ ಸೇವಂತಿಗೆಗಳನ್ನು ಕುಂಡಗಳಲ್ಲಿ ಬೆಳೆಸಿ, ಆ ಕುಂಡಗಳನ್ನು ಗುಂಪಾಗಿ ಜೋಡಿಸಿದರೆ ಇವು ನೋಡುಗರ ಕಣ್ಮನ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ.
    ಜರ್ಬೆರಾಗಳನ್ನು ಕುಂಡಗಳಲ್ಲಿ ಬೆಳೆಸಬಹುದಾದರೂ, ಇವು ಕುಂಡಕ್ಕಿಂತ ನೆಲದ ಮೇಲೆಯೇ ಆರೋಗ್ಯವಾಗಿ ಬೆಳೆಯುತ್ತವೆ. ಮತ್ತು ಹೆಚ್ಚು ಹೂಗಳನ್ನು ಕೊಡುತ್ತವೆ.      
 
  ತಾವರೆ:

ಇದನ್ನು pondಗಳಲ್ಲಿ ಬೆಳೆಸಬೇಕು. ಸಾಧಾರಣವಾಗಿ 1 feet ಎತ್ತರ ಮತ್ತು 2 feet ವ್ಯಾಸವುಳ್ಳ pond ಒಂದು ತಾವರೆಗಿಡಕ್ಕೆ ಸಾಕಾಗುತ್ತದೆ. ಅದಕ್ಕಿಂತ ದೊಡ್ಡ ಕೊಳ ಇದ್ದರೆ ಒಂದಕ್ಕಿಂತ ಹೆಚ್ಚು ಗಿಡಗಳನ್ನು ಹಾಕಬಹುದು. Pondನಲ್ಲಿ 4 ಮಣ್ಣು ಮತ್ತು ಮರಳಿನ ಮಿಶ್ರಣವನ್ನು ಹಾಕಿ ನೀರು ತುಂಬಿಸಿ ಇಡಬೇಕು. ನಂತರ  ತಾವರೆ ಗಿಡವನ್ನು ಅದರಲ್ಲಿ ನೆಡಬೇಕು. ತಾವರೆ ಎಲೆಗಳು ನೀರಿನಿಂದ ಮೇಲೆ ಬರುತ್ತದೆ. ದೊಡ್ಡ ಗಿಡವಾದರೆ 15 ದಿನಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ.ಇದಕ್ಕೆ ಹೆಚ್ಚಿನ ಗೊಬ್ಬರ ಬೇಕಾಗುವುದಿಲ್ಲ. ತಾವರೆಯಲ್ಲಿ 5 ಹೊಸ ಎಲೆಗಳನ್ನು ಮಾತ್ರ ಉಳಿಸಿಕೊಂಡು ಉಳಿದ ಎಲೆಗಳನ್ನು ಕತ್ತರಿಸಿ ತೆಗೆಯಬೇಕು. ಕೊಳಗಳಲ್ಲಿ ಮೀನು ಬಿಟ್ಟರೆ ನೀರು ತಿಳಿಯಾಗಿರುತ್ತದೆ.

ಈ ಹೂಗಳಲ್ಲದೆ ನಿಮ್ಮ ಕೈತೋಟದಲ್ಲಿ ಸ್ಥಳಾವಕಾಶವನ್ನು ನೋಡಿಕೊಂಡು ವಿವಿಧ ಬಗೆಯ seasonal ಹೂಗಳನ್ನು ಬೆಳೆಸಬಹುದು . ಈ ಸೀಸನ್ ಹೂವಿನ ಗಿಡಗಳು ಸಾಧಾರಣ 2 ತಿಂಗಳು ಚೆನ್ನಾಗಿ ಹೂಬಿಟ್ಟು ನಂತರ ಸತ್ತು ಹೋಗುತ್ತವೆ. ಆ ಸ್ಥಳದಲ್ಲಿ ನಾವು ಪುನಃ ಬೇರೆ ಸೀಸನ್ ಹೂವಿನ ಗಿಡಗಳನ್ನು ನೆಟ್ಟು ಬೆಳೆಸಬಹುದು.
ಅಲ್ಪ ಪರಿಶ್ರಮ ಮತ್ತು ಆಸಕ್ತಿ ಇದ್ದರೆ ಹಸಿರೆಲೆ ಗಿಡಗಳನ್ನು ಆಕರ್ಷಕವಾಗಿ ಬೆಳೆಸಬಹುದು. ಇವುಗಳನ್ನು ಕುಂಡಗಳಲ್ಲಿ ಬೆಳೆಸಿ ಮನೆಯ ಒಳಗೂ ಹೊರಗೂ ಮತ್ತು ವೆರಾಂಡದಲ್ಲಿಡಲು ಉಪಯೋಗಿಸಬಹುದು. ಇವು ಕಣ್ಮನಕ್ಕೆ ತಂಪನ್ನು ನೀಡುವುದರ ಜೊತೆಗೆ ಮನೆಯ ಅಂದವನ್ನು ಹೆಚ್ಚಿಸುತ್ತವೆ.
ಎಲ್ಲಾ ಋತುಗಳಲ್ಲೂ ಹೂಬಿಡುವಂತೆ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದರೆ ಪ್ರತಿಯೊಂದು ಕಾಲದಲ್ಲೂ ಒಂದಲ್ಲ ಒಂದು ವಿಧದ ಹೂಗಳು ಅರಳಿ ನಿಮ್ಮ ಕೈತೋಟ ನೋಡಲು ಸುಂದರವಾಗಿ ಕಾಣುತ್ತದೆ. ನೀವು ಬೆಳೆಸಿದ ಕೈತೋಟ, ನಿಮಗೂ ನೋಡುಗರಿಗೂ ಸಂತೋಷವನ್ನು ಕೊಡುವುದಲ್ಲದೆ ನಿಮ್ಮ ಮನೆಯಂಗಳಕ್ಕೊಂದು ಅಪೂರ್ವ ಕಳೆಯನ್ನು ನೀಡುತ್ತದೆ. ಇದಕ್ಕಾಗಿ ನೀವು ಸ್ವಲ್ಪ ಸಮಯ ಮತ್ತು ಹಣವನ್ನು ವಿನಿಯೋಗಿಸಬೇಕಾಗುತ್ತದೆ . ಆದರೆ ಇದರಿಂದ ಸಿಗುವ ತೃಪ್ತಿ ಮತ್ತು ಸಂತೋಷ ನೀವು ವಿನಿಯೋಗಿಸಿದ ಹಣ ಮತ್ತು ಸಮಯಕ್ಕಿಂತ ಎಷ್ಟೋ ಮಿಗಿಲಾದುದು.              

2 comments:

  1. ಸಕತ್ತಾಗಿದ್ದು ಚಿತ್ರಲೇಖನ.
    ಮಾಲಾ

    ReplyDelete
  2. So pleased to know about the procedure of making Maneya Hoodota
    Thnk u dear

    ReplyDelete