Monday, 31 March 2014

ತುಳುನಾಡಿನಲ್ಲಿ ಭೂತಾರಾಧನೆ

ಕರ್ನಾಟಕದ ಉಡುಪಿ ಜಿಲ್ಲೆಯ ಕೆಲವು ಭಾಗ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಸರಗೂಡು ಜಿಲ್ಲೆಗಳಲ್ಲಿ ತುಳುಮಾತನಾಡುವ ಜನರಿದ್ದಾರೆ. ಈ ತುಳು ಮಾತನಾಡುವ ಜನರಿರುವ ಪ್ರದೇಶವೇ ತುಳುನಾಡು. ತುಳು ನಾಡಿನಲ್ಲಿ ಭೂತಾರಾಧನೆ ತುಂಬಾ ಪ್ರಸಿದ್ದ. 
ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಭೂತಾರಾಧನೆಯನ್ನು ನೋಡುತ್ತಾ ಬೆಳೆದವಳು. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭೂತಗಳ ಬಗ್ಗೆ ಅವುಗಳ ಆರಾಧನೆಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಇಲ್ಲಿ ಬರೆಯುತ್ತಿದ್ದೇನೆ. 
ಭೂತವನ್ನು ಇಲ್ಲಿ ದೈವ ಎಂದೂ ಕರೆಯುತ್ತಾರೆ. ದೇವರಂತೆ ಭೂತಗಳು ಒಂದು spiritual spirit. ಇವುಗಳಲ್ಲಿ  ಹಲವು ಹೆಸರಿನ ಭೂತಗಳಿವೆ. ಅದರಲ್ಲಿ ಪ್ರಮುಖ ಭೂತಗಳು ಉಳ್ಳಾಲ್ತಿ, ಧೂಮಾವತಿ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಮಲರಾಯ, ಚಾಮುಂಡಿ, ಲಕ್ತೇಶ್ವರಿ ಇತ್ಯಾದಿ.

ಚಾಮುಂಡಿ ದೈವ

ಧೂಮಾವತಿ ದೈವ

ದೇವರಿಗೆ ಕಟ್ಟಿದಂತೆ ದೈವಕ್ಕೂ ಮಂದಿರವನ್ನು ಕಟ್ಟುತ್ತಾರೆ. ಇದಕ್ಕೆ ಭೂತಸ್ಥಾನ ಅಥವಾ ಭೂತದ ಗುಡಿ ಎಂದು ಕರೆಯುತ್ತಾರೆ. ಭೂತಾರಾಧನೆಗೆ ತುಳುವಿನಲ್ಲಿ ಭೂತಕೋಲ ಅಥವಾ ಭೂತ ನೇಮ ಎನ್ನುತ್ತಾರೆ. ಇದರಲ್ಲೂ ಹಲವು ವಿಧಗಳಿವೆ. ಕೆಲವು ಭೂತಗಳನ್ನು ಒಂದು ಕುಟುಂಬದವರು ತಮ್ಮ ಪೂರ್ವಜರ ಕಾಲದಿಂದಲೂ ನಂಬಿ, ಭೂತದ ಗುಡಿ ಕಟ್ಟಿ ಅಲ್ಲಿ ವರ್ಷಕ್ಕೊಮ್ಮೆ ಭೂತಕೋಲ ನಡೆಸುತ್ತಾ ಬಂದಿದ್ದಾರೆ. ಕುಟುಂಬದವರ ಆರ್ಥಿಕ ಸ್ಥಿತಿಗೆ ಹೊಂದಿಕೊಂಡು ಭೂತಕೋಲ ನಡೆಸುತ್ತಾರೆ. ಶ್ರೀಮಂತ ಕುಟುಂಬದವರು ಊರವರನ್ನೆಲ್ಲಾ ಕರೆದು ಅನ್ನದಾನ ಮಾಡಿ, ದೊಡ್ಡ ಚಪ್ಪರ ಸುಂದರ ಅಲಂಕಾರಗಳನ್ನು ಮಾಡಿ ಆಚರಿಸಿದರೆ, ಅಷ್ಟೊಂದು ಶ್ರೀಮಂತರಲ್ಲದ ಕುಟುಂಬದವರು ಕೆಲವರಿಗೆ ಮಾತ್ರ ಅನ್ನದಾನ ಮಾಡಿ, ಹೆಚ್ಚು ಜನರನ್ನು ಸೇರಿಸದೆ ಕುಟುಂಬದವರು ಮಾತ್ರ ಸೇರಿ ಭೂತಕೋಲ ನಡೆಸುತ್ತಾರೆ. ಆದರೆ ಧಾರ್ಮಿಕ ಆಚರಣೆಗಳು ಒಂದೇ ರೀತಿ.
ಇನ್ನೂ ಕೆಲವು ಭೂತಗಳು ಒಂದು ಹಳ್ಳಿಯವರೆಲ್ಲಾ ನಂಬಿಕೊಂಡು ಬಂದ ದೈವಗಳು. ಹಳ್ಳಿಯ ಮಧ್ಯದಲ್ಲಿ ಭೂತಸ್ಥಾನ ಇರುತ್ತದೆ. ಹಳ್ಳಿಯ ಜನರೆಲ್ಲ ಸೇರಿ ಭೂತನೇಮ ಆಚರಿಸುತ್ತಾರೆ. ನನ್ನ ಹುಟ್ಟೂರಲ್ಲಿ ಕಲ್ಕುಡ ಭೂತದ ಗುಡಿ ಇದೆ. ಅಲ್ಲಿ ಪ್ರತಿ ವರ್ಷ ಊರವರೆಲ್ಲಾ ಸೇರಿ ಸಡಗರದಿಂದ ಕಲ್ಕುಡ ಕೋಲ ನಡೆಸುತ್ತಾರೆ.
ಇನ್ನು ಕೆಲವು ಭೂತಗಳು ಹಲವು ಹಳ್ಳಿ ಪಟ್ಟಣಗಳಿಗೆ ಸೇರಿದ ದೈವಗಳಾಗಿರುತ್ತವೆ. ಇವುಗಳ ಭೂತದ ಗುಡಿ ದೊಡ್ಡದಾಗಿ ಸುತ್ತ ಮುತ್ತ ಕೋಲ ನಡೆಯಲು ತುಂಬಾ ಜಾಗ ಇರುತ್ತದೆ.  ಹಾಗೆಯೇ ಜನರಿಗೆ ಕುಳಿತುಕೊಳ್ಳಲು gallery ಅಂತಹ ಶಾಶ್ವತ ಕಟ್ಟೆಗಳ ವ್ಯವಸ್ಥೆ ಇರುತ್ತದೆ. ಈ ಭೂತನೇಮಕ್ಕೆ ತುಂಬಾ ಜನರು ಸೇರುತ್ತಾರೆ. ಈ ಭೂತಕ್ಕೆ ಸಂಬಂಧಿಸಿದವರು ಕಮಿಟಿ ಮಾಡಿ, ಆ ಕಮಿಟಿಯವರ ಮುಂದಾಳ್ತನದಲ್ಲಿ ಭೂತ ನೇಮ ನಡೆಯುತ್ತದೆ. ಈ ಭೂತಗಳಿಗೆ ತುಂಬಾ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, ಬೆಳ್ಳಿಯ ಮುಖವಾಡ, ಚಿನ್ನದ ನಾಲಿಗೆ ಇತ್ಯಾದಿಗಳು ಇರುತ್ತವೆ. ಹರಕೆಯ ರೂಪದಲ್ಲಿ ತುಂಬಾ ದುಡ್ಡು, ಬೆಳ್ಳಿ, ಚಿನ್ನ ಇತ್ಯಾದಿಗಳನ್ನು ಭಕ್ತರು ಕಾಣಿಕೆ ಡಬ್ಬಕ್ಕೆ ಹಾಕುತ್ತಾರೆ. ಜನರು ತಮಗೆ ಏನಾದರೂ ಕಷ್ಟ ಬಂದಾಗ, ಈ ಕಷ್ಟ ಕಳೆದರೆ ಭೂತಕ್ಕೆ ಹರಕೆ ಕೊಡುತ್ತೇವೆ ಎಂದು ಯೋಚಿಸಿರುತ್ತಾರೆ. ಹರಕೆಯ ರೂಪದಲ್ಲಿ ಬೆಳ್ಳಿಯ ಹಸು, ನಾಯಿ, ಬೆಕ್ಕು, ಪ್ರತಿಮೆ, ಸರ್ಪದ ಹೆಡೆ ಇತ್ಯಾದಿಗಳನ್ನು ಭೂತಕ್ಕೆ ಅರ್ಪಿಸುತ್ತಾರೆ. ಕೆಲವರು ಚಿನ್ನವನ್ನು ಸಹ ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ.ಇದು ಭೂತಾರಾಧನೆಯ ಬಗ್ಗೆ ಸಂಕ್ಷಿಪ್ತ ವಿವರವಾಯಿತು. 


                                    ಕಲ್ಲುರ್ಟಿ ದೈವ

ಪಂಜುರ್ಲಿ  ದೈವ

ಮಲರಾಯ ದೈವ

ನಾನು ಈ ಲೇಖನದಲ್ಲಿ ಹಲವು ಹಳ್ಳಿ ಮತ್ತು ಪಟ್ಟಣಗಳ ಜನರೆಲ್ಲ ಸೇರಿ ನಡೆಸುವ ಉಳ್ಳಾಲ್ತಿ ಭೂತದ ಬಗ್ಗೆ ಸ್ವಲ್ಪ ವಿವರಗಳನ್ನು ಬರೆಯುತ್ತೇನೆ. ಉಳ್ಳಾಲ್ತಿ ಭೂತವನ್ನು Mother Goddess ಎನ್ನಬಹುದು. ದ.ಕ(ದಕ್ಷಿಣ ಕನ್ನಡ)ದ ಅನಂತಾಡಿ, ಕೆಲಿಂಜ ಮತ್ತು ಮಾಣಿ ಎಂಬಲ್ಲಿನ  ಉಳ್ಳಾಲ್ತಿನೇಮ ತುಂಬಾ ಪ್ರಸಿದ್ಧ.
ಈ ಭೂತ ನೇಮ ಎಂದರೆ ಭೂತದ ವೇಷ ಹಾಕಿ ಉಳ್ಳಾಲ್ತಿ ದೈವಕ್ಕೆ ಸಮಾಧಾನವಾಗುವಂತೆ ನಡೆದುಕೊಳ್ಳುವುದು. ಭೂತಗಳ ಭಾಷೆ ತುಳು. ಭೂತದ ವೇಷಧಾರಿ ಇಲ್ಲಿ ಗುಡಿಗೆ ಸುತ್ತು ಬರುತ್ತಾರೆ. ಒಂದೊಂದು ಸುತ್ತಿಗೂ ವೇಷಧಾರಿಯ ನಾಟ್ಯ ಬೇರೆ ಬೇರೆ ರೀತಿ ಇರುತ್ತದೆ. ಭೂತ ಕಟ್ಟುವವರು ಸಹ ಒಂದೇ ಮನೆತನದವರು. ಇದು ಅವರಿಗೂ ವಂಶಪಾರಂಪರ್ಯವಾಗಿ ಬಂದುದು. ಆ ಮನೆತನಗಳ ಹೆಸರು – ನಲಿಕೆಯವರು, ಪರವರು ಇತ್ಯಾದಿ. ಭೂತ ಕಟ್ಟುವ ಮನುಷ್ಯ ಶುದ್ಧದಲ್ಲಿ ಇರಬೇಕು.
ರಾತ್ರಿ ಭೂತ ನೇಮ ಎಂದಾದರೆ ಭೂತ ಕಟ್ಟುವವರು, ಅವರ ಮನೆಯವರೆಲ್ಲರೂ ಬೆಳಗ್ಗೆಯೇ ಭೂತದ ಗುಡಿಯ ಬಳಿ ಬರುತ್ತಾರೆ. ಮನೆಯವರು ಎಂದರೆ ಭೂತ ಕಟ್ಟುವವನ ಅಮ್ಮ, ಸಹೋದರ ಸಹೋದರಿಯರು, ಪತ್ನಿ ಮತ್ತು ಮಕ್ಕಳು. ಇವರು ಭೂತಕ್ಕೆ ಬೇಕಾದ ಪರಿಕರಗಳನ್ನು ready ಮಾಡುತ್ತಾರೆ. ಭೂತಕ್ಕೆ ಅಣಿ ಎಂಬುದು ಇರುತ್ತದೆ. ಅದು ಭೂತದ ಮುಖ್ಯ ಅಲಂಕಾರಗಳಲ್ಲಿ ಒಂದು. ಈ ‘ಅಣಿ’ ಬಿದಿರ ಹಂದರವಾಗಿರುತ್ತದೆ. ನಂತರ ಅದನ್ನು ಎಳೆಯ ತೆಂಗಿನ ಗರಿ, ಮಲ್ಲಿಗೆ, ಸೇವಂತಿಗೆ, ಚೆಂಡು ಹೊಗಳಿಂದ ಅಲಂಕರಿಸುತ್ತಾರೆ. ಈ ಅಣಿ ಎಲ್ಲಾ ಭೂತಕೋಲಗಳಲ್ಲಿರುವ ಭೂತಗಳಿಗೆ ಇರುತ್ತವೆ. ಉಳ್ಳಾಲ್ತಿ ದೈವಕ್ಕೆ ಅದರದ್ದೇ ಆದ ಬೆಳ್ಳಿಯ ಅಣಿ ಇದೆ. ಇದು ರಾತ್ರಿ tubelight ಬೆಳಕಿನಲ್ಲಿ ಜಗಮಗಿಸುತ್ತದೆ. ಹೀಗೆ ಅಲಂಕರಿಸುವಾಗ ಭೂತಕಟ್ಟುವವರ ಮನೆಯ ಹೆಂಗಸರು ವಿಶಿಷ್ಟವಾದ ತುಳು ಹಾಡುಗಳನ್ನು ಹಾಡುತ್ತಿರುತ್ತಾರೆ. ಅದಕ್ಕೆ “ಪಾಡ್ದನ” ಎನ್ನುತ್ತಾರೆ. ಈ ಪಾಡ್ದನದಲ್ಲಿ ಭೂತದ ಹುಟ್ಟಿನಿಂದ ಹಿಡಿದು ಇಲ್ಲಿ ಬಂದು ನೆಲೆಸಿದ ಬಗ್ಗೆ ಸಂಪೂರ್ಣ ವಿವರ ಇರುತ್ತದೆ.
ಭೂತದ ವೇಷಧಾರಿ ತನ್ನ ಮುಖಕ್ಕೆ ಹಳದಿ ಬಣ್ಣವನ್ನು ಹಚ್ಚುತ್ತಾನೆ. ಅದಕ್ಕೆ “ಅರ್ದಳ” ಎನ್ನುತ್ತಾರೆ. ಹಾಗೆಯೇ ಕಣ್ಣಿನ ಸುತ್ತ ಕಾಡಿಗೆ ಅಲಂಕಾರ, ಬೇಕಾದಲ್ಲಿಗೆ ಕೆಂಪು ಬಣ್ಣ ಹಚ್ಚಿ ಅಲಂಕರಿಸಿಕೊಳ್ಳುತ್ತಾರೆ. ಹಾಗೆಯೇ ಭೂತದ ದಿರಿಸುಗಳನ್ನು ತೊಟ್ಟು ಸಿದ್ದವಾಗುತ್ತಾರೆ. ಹೀಗೆ ಉಳ್ಳಾಲ್ತಿ ಭೂತ ತನ್ನ ಅಣಿಯನ್ನು ಕಟ್ಟಿ ಮುಖಕ್ಕೆ ಬೆಳ್ಳಿಯ ಮುಖವಾಡ, ಚಿನ್ನದ ನಾಲಿಗೆಗಳಿಂದ ಅಲಂಕೃತವಾಗುತ್ತದೆ. ಶುಭ ಮುಹೂರ್ತದಲ್ಲಿ ಕಾಲಿಗೆ “ಗಗ್ಗರ”ವನ್ನು ಕಟ್ಟಿ ಭೂತ ತನ್ನ ಕೋಲಕ್ಕೆ ಸಿದ್ದವಾಗುತ್ತದೆ. ಗಗ್ಗರವೆಂದರೆ ಕಾಲಿಗೆ ಕಟ್ಟುವ ಗೆಜ್ಜೆಯ ತರದ ಸಾಧನ. ಭೂತ ಸಿದ್ದವಾದಮೇಲೆ ಭೂತದ ಸುತ್ತಮುತ್ತ ಇರುವವರು ಹೂಗಳನ್ನು ಭೂತದಮೇಲೆ ಎರಚುತ್ತಾರೆ. ಅದೇ ಭೂತನೇಮದ ಆರಂಭ. ಆಗ ಭೂತದ ವೇಷಧಾರಿಯಲ್ಲಿ ದೈವ ಆವಾಹನೆಯಾಗಿದೆ ಎಂದು ಎಲ್ಲಾ ಭಕ್ತರ ಧೃಡವಾದ ನಂಬಿಕೆ. ಹೀಗೆ ರಾತ್ರಿಯಾದೊಡನೆ ಭೂತನೇಮ ಆರಂಭವಾಗುತ್ತದೆ.
ಈ ಅಲಂಕೃತ ಭೂತ, ಗುಡಿಗೆ 9 ಸುತ್ತು ಬರುತ್ತದೆ. ಉಳ್ಳಾಲ್ತಿ ನೇಮದಲ್ಲಿ ಭೂತ, ಗುಡಿಗೆ ಸುತ್ತು ಬರುವಾಗ ಮುಂದಿನಿಂದ ಅಲಂಕೃತ ಪಲ್ಲಕಿ, ಧ್ವಜದಂತಹ ಕೆಲವು ರಚನೆಗಳನ್ನು ಹಿಡಿದವರು, ದೀವಟಿಕೆ ಹಿಡಿದವರು, gas light ಹಿಡಿದವರು, ಎರಡುಜನ ಭೂತಮಾಣಿಗಳು(ಭೂತದ ಶಿಷ್ಯರು) ಭೂತದ ಗುಡಿಗೆ ಸುತ್ತು ಬರುತ್ತಾರೆ. ಭೂತ ಇವರೆಲ್ಲರ ಹಿಂದಿನಿಂದ ತನ್ನ ವಿಶಿಷ್ಟ ನಾಟ್ಯದೊಡನೆ ಗುಡಿಗೆ ಸುತ್ತು ಬರುತ್ತದೆ.
 ಪ್ರತಿ ಸುತ್ತಿಗೂ ಒಂದೊಂದು ಹೆಸರು ಇರುತ್ತದೆ. ಮದಿಮ್ಮಾಳು ಸುತ್ತು, ಭಜನೆ ಸುತ್ತು, ವಾದ್ಯಸುತ್ತು, ಓಡಬಲಿ ಇತ್ಯಾದಿ. ಮೊದಲ ಸುತ್ತು ಮದಿಮ್ಮಾಳು ಸುತ್ತು. ಇದು ತುಂಬಾ ನಿಧಾನ. ಈ ರೀತಿ ಗುಡಿಗೆ ಸುತ್ತು ಬರಲು ಒಂದು ಘಂಟೆ ಬೇಕು. ನಂತರದ ಸುತ್ತುಗಳು ಸ್ವಲ್ಪ ಸ್ವಲ್ಪ ವೇಗಪಡೆದು ಕೊನೆಯ ಸುತ್ತಾದ ಓಡಬಲಿ ತುಂಬಾ fast. ಓಡಬಲಿಯಲ್ಲಿ ಗುಡಿಗೆ ಒಂದು ಸುತ್ತು ಬರಲು 5 ನಿಮಿಷ ಸಾಕು. ಓಡಬಲಿ 3 ಸುತ್ತು ಇರುತ್ತದೆ. ಈ ಸುತ್ತುಗಳಲ್ಲಿ ಉಳ್ಳಾಲ್ತಿ ಭೂತ ತನ್ನ ಅಣಿ, ಮುಖವಾಡ, ನಾಲಿಗೆ ಇತ್ಯಾದಿಗಳನ್ನು ತೆಗೆದಿರಿಸಿ ಓಡುತ್ತಾ ಗುಡಿಗೆ 3 ಸುತ್ತು ಬರುತ್ತದೆ. ಕೊನೆಗೆ ಭೂತದ ಗುಡಿಯ ಎದುರು ಬೀಳುತ್ತದೆ. ಅಲ್ಲಿಗೆ ಭೂತಕೋಲದ ಕಾರ್ಯಕ್ರಮ ಮುಗಿಯಿತು. ಈನಡುವೆ ಮತ್ತು ಕೊನೆಗೆ ಭೂತಕ್ಕೆ ದೊಡ್ಡ ದೊಡ್ಡ ಹರಕೆ ಹೊತ್ತವರು ಭೂತದ ಎದುರು ಹರಕೆ ಯಾವ ಸಂದರ್ಭದಲ್ಲಿ ಹೇಳಿದ್ದು, ಇದರಿಂದ ಹೇಗೆ ಕಷ್ಟ ಪರಿಹಾರವಾಯಿತು ಎಂದು ಭೂತದ ಜೊತೆ ಹೇಳಿ ಆಶೀರ್ವಾದ ಪಡೆಯುತ್ತಾರೆ. ಮಮೂಲಾಗಿ ಹರಕೆ ಹೇಳಿದವರು ತಮ್ಮ ಹರಕೆಯ ದುಡ್ಡು ಮತ್ತು ಬೇರೆ ಬೇರೆ ಬೆಳ್ಳಿ ಚಿನ್ನದ ವಸ್ತುಗಳನ್ನು ಕಾಣಿಕೆ ಡಬ್ಬಿಗೆ ಹಾಕುತ್ತಾರೆ. ಭೂತವು ಜನರನ್ನು ಆಶೀರ್ವದಿಸಿ “ಬೂಳ್ಯ”ವನ್ನು ಕೊಡುತ್ತದೆ. ಬೂಳ್ಯ ಎಂದರೆ ಹಲಸಿನ ಎಲೆಗೆ ಗಂಧ ಮತ್ತು ಅಕ್ಷತೆ ಹಾಕಿ ಭೂತದ ಎದುರು ಹಿಡಿದರೆ ಭೂತ ತನ್ನ ಕೈಯಲ್ಲಿರುವ ಖಡ್ಗದಿಂದ ಮುಟ್ಟಿ ಆಶೀರ್ವದಿಸುತ್ತದೆ. ಆ ಗಂಧವನ್ನು ಎಲ್ಲರೂ ಹಾಕಿಕೊಳ್ಳುತ್ತಾರೆ. ಭೂತ ತನ್ನ areaದ ಜನರಿಗೆ, ಜಾನುವಾರುಗಳಿಗೆ ಆಯುರಾರೋಗ್ಯ ಕೊಟ್ಟು ಕಾಪಾಡುವುದಾಗಿ ಅಭಯ ಕೊಡುತ್ತದೆ. ಹಾಗೆಯೇ ಕೆಲವರಿಗೆ ಮುಂದೆ ಭೂತಕ್ಕೆ ಏನು ಮಾಡಬೇಕು ಎಂಬ ಸಲಹೆಯನ್ನು ಕೊಡುತ್ತದೆ. ಕೆಲವರಿಗೆ ಹೀಗೆ ಮಾಡಬಾರದು ಎಂಬ ಎಚ್ಚರಿಕೆಯನ್ನೂ ಕೊಡುತ್ತದೆ.
ಹೀಗೆ ರಾತ್ರಿ ನಡೆಯುವ ಉಳ್ಳಾಲ್ತಿ ನೇಮ 9 ಘಂಟೆಗೆ ಆರಂಭವಾಗಿ ಸಾಧಾರಣ 12 ಘಂಟೆಗೆ ಮುಗಿಯುತ್ತದೆ. ನಡುನಡುವೆ “ಗರ್ನಾಲು”ಗಳ ಶಬ್ಧ ಖುಷಿಕೊಡುತ್ತದೆ. ಗರ್ನಾಲು ಎಂದರೆ ಪಟಾಕಿಯಂತೆ ಶಬ್ಧ ಉಂಟು ಮಾಡುವ ಒಂದು ವಸ್ತು. ಆ ದಿನ ತುಂಬಾ ಗೂಡಂಗಡಿಗಳೂ, ಹರಕೆ ವಸ್ತುವನ್ನು ಮಾರುವ ಅಂಗಡಿಗಳೂ, ಬೆಂಡು ಬತ್ತಾಸು ಇತ್ಯಾದಿಗಳ ಅಂಗಡಿಗಳೂ ಇರುತ್ತವೆ.
ಮುಖವಾಡ ಇಡುವ ಮೊದಲು ಉಳ್ಳಾಲ್ತಿ ದೈವ

ಉಳ್ಳಾಲ್ತಿ ದೈವದ ಬೆಳ್ಳಿಯ ಮುಖವಾಡ

 

ಬೆಳ್ಳಿಯ ಮುಖವಾಡ, ಚಿನ್ನದ ನಾಲಿಗೆ ಮತ್ತು ಬೆಳ್ಳಿಯ ಅಣಿ 
ಇವುಗಳಿಂದ ಅಲಂಕೃತವಾದ ಉಳ್ಳಾಲ್ತಿ ದೈವ

ನಾನು ಹುಟ್ಟಿನಿಂದಲೂ ಭೂತ ಕೋಲಗಳನ್ನು ನೋಡುತ್ತಾ ಬೆಳೆದವಳು. ನನಗೆ ದ.ಕ ಜಿಲ್ಲೆಯ ಎಲ್ಲರಂತೆ ಭೂತದ ಬಗ್ಗೆ ಅಪಾರ ನಂಬಿಕೆ ಹಾಗೂ ಭಕ್ತಿ ಇದೆ. ದೈವಗಳಿಗೆ ಕೋಪ ಜಾಸ್ತಿ ಎಂದು ನಂಬಿಕೆ. ದೇವರಿಗೆ ಸಹನೆ ಹೆಚ್ಚು. ಹಾಗಾಗಿ ನಮ್ಮಿಂದ ಏನಾದರೂ ತಪ್ಪಾದರೆ ನಮಗೆ ತೊಂದರೆ ಕೊಡಬೇಡ ಎಂದು ಭೂತಕ್ಕೆ ಎಲ್ಲರೂ ಪ್ರಾರ್ಥಿಸುತ್ತಾರೆ. ತನ್ನನ್ನು ನಂಬಿದವರನ್ನು ಭೂತ ಕಾಪಾಡುತ್ತದೆ ಎಂಬುದು ತುಳು ನಾಡಿನವರ ಒಂದು ದೃಢವಾದ ನಂಬಿಕೆ.

12 comments:

 1. Thanks Savitha. Good information. I remember, we had a lesson on ಭೂತರಾಧನೆ in our middle school texts. Do you remember that?

  ReplyDelete
 2. ಸವಿತಾ ಮಡಿಕೇರಿಯವರ ಚಿತ್ರ ಲೇಖನ 'ತುಳುನಾಡಿನಲ್ಲಿ ಭೂತಾರಾಧನೆ' ಯಲ್ಲಿ ಅಣಿ , ಗಗ್ಗರ, ಪಾಡ್ದನ, ಗರ್ನಾಲು, ಅಭಯ ಮುಂತಾದ ಶಬ್ದಗಳನ್ನು ಓದುತ್ತಿರುವಾಗ ರೋಮಾಂಚಕ ಮತ್ತು ಅಷ್ಟೇ ದೈವ ಭಕ್ತಿ ಮೂಡುತ್ತದೆ. ಭಗವಂತನ ಅಂಶವನ್ನು ಹೊಂದಿರುವ ಈ ದೈವ-ಭೂತಗಲ್ ಬಹಳ ಕಾರಣಿಕ ಸದೃಶ ಎಂಬುದಾಗಿ ಕರಾವಳಿಯ ಉಭಯ ಜಿಲ್ಲೆಗಳಲ್ಲೂ ಪ್ರತೀಕವಿದೆ

  ReplyDelete
 3. very well written article ,simple and interesting explanations. I like the name of your blog "nidhisiri "for obvious reason.
  [addition -there exists another Ullalthi worship center at Kepu , near Vitla]

  Ramaraj P N

  ReplyDelete
 4. Hi savitha lekhana bahala chennagide. Idu ondu aparoopada lekhana adakke poorakavaada chitragalu .abhinandanegalu.

  ReplyDelete
 5. ಲೇಖನ ಚೆನ್ನಾಗಿದೆ ಆದ್ರೆ ನೀವು ಬರೆದಿರುವಂತದು ಕೇವಲ ಕೆಲಿಂಜದ ಉಳ್ಲಾಲ್ತಿಯ ಕ್ರಮ ಅಲ್ಲಿಯ ಕಥೆಯನ್ನು ಕೂಡ ಉಲ್ಲೇಖಿಸಿದ್ದರೆ ಇನ್ನು ಚೆನ್ನಾಗಿ ಇರುತ್ತಿತ್ತು

  ReplyDelete
 6. ಅಕ್ಕ ನೀವು ಬರೆದಿರುವ ಲೇಖನ‌ ತುಂಬ ಚೆನ್ನಾಗಿದೆ .ನನಗೆ ಇಂತಹ ವಿಚಾರಗಳಲ್ಲಿ ತುಂಬಾನೆ ಆಸಕ್ತಿ ...ನಮ್ಮ ತುಳುನಾಡ ವಿಚಾರಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳನ್ನು‌ ತಿಳಿದುಕೊಳ್ಳುವ ಕುತೂಹಲ ...ಧನ್ಯವಾದಗಳು‌ ಅಕ್ಕ

  ReplyDelete